Sri Garuda Devara Stotra Sulaadi

ಶ್ರೀ ಅಭಿನವ ಪ್ರಾಣೇಶವಿಠಲದಾಸಾರ್ಯ ವಿರಚಿತ 


 ಶ್ರೀ ಗರುಡದೇವರ ಸ್ತೋತ್ರ ಸುಳಾದಿ 


 ರಾಗ ಮೋಹನ 


 ಧ್ರುವತಾಳ 


ಕನಕಗರ್ಭನ ಸುತ ಕಾಲನಾಮಕನೀತ 

ಕಾನಕಾಸು ಪಕ್ಷ ಸರ್ವ ಪಕ್ಷೀಶನೆ 

ವಿನುತ ಕಶ್ಯಪ ಋಷಿ ತನುಭವನೆನಿಸಿದ

ಫಣಿ ಭೂಷಣಿ ಫಣಿ ಸಮಕಕ್ಷದಿ ಸೇರಿದ

ಅನುಜಹಿ ಮೂರುತಿ ಪೊಂಬಣ್ಣನೆ

ಮುನಿಗಜಕೂರ್ಮರ ನುಂಗಿ ತೇಗಿದ ಧೀರ 

ಮುನಿವಾಲಖಿಲ್ಯರ ವರವ ಪಡೆದ

ವನಧಿಯೆಡೆಗೆ ಮಂದರ ಗಿರಿ ತಂದ

ವಿರೋಚನ ಪುತ್ರ ಬಲಿ ಒಯ್ದ ಮುಕುಟ ತಂದೆ

ವನದ ಶ್ಯಂದನನೊಡ ಸೆಣಸ್ಯಾಡಿಯಮೃತ - 

ವನು ತಂದ ಪಿತೃ ಗಣ ನಾಗಾನಂದ 

ಘನ ನಿಭ ಅಭಿನವ ಪ್ರಾಣೇಶವಿಟ್ಠಲನ 

ಅನುರಾಗವನು ಪಡೆದ ವೀಪ ಗರುಡದೇವ ॥ 1 ॥ 


 ಮಟ್ಟತಾಳ 


ಸೌಪರ್ಣಿಪತಿ ರುಗ್ಮವರ್ಣಕಾಯ

ಕೂಪರಾದ ಮಧ್ಯ ನಾವಿಕರನು ಮೆದ್ದ

ಶ್ರೀಪತಿಯನು ಪೊತ್ತು ಕರದಿಹ ಪದ ನಖದಿ

ಭೂಪನ ಪ್ರತಿಬಿಂಬ ನೋಡಿ ನಲಿವ ದೇವ

ಗೋಪತಿ ಅಭಿನವ ಪ್ರಾಣೇಶವಿಟ್ಠಲನ 

ರೂಪ ರಾಜ್ಯವ ತೋರು ಮಾಪತಿಯ ವಾಹನ ॥ 2 ॥ 


 ತ್ರಿವಿಡಿತಾಳ 


ಧುರಲಂಕಾಪುರದಲ್ಲಿ ಮರ್ಕಟವೀರರ 

ಹರಿಜಿತು ಸರ್ಪಾಸ್ತ್ರದಿಂದ ಬಂಧಿಸೆ

ಹರಿ ರಾಮರಾದೇಶವರಿತು ಧಾವಿಸಿ ಬಂದು

ಉರಗಾಸ್ತ್ರ ಬಂಧನ ಪರಿಹರಿಸಿ

ತರುಚರ ಗಢಣಕ್ಕೆ ಹರುಷವ ಬೀರಿದೆ

ಶಿರಿಯರಸನ ಆಜ್ಞೆ ಪೂರೈಸಿದೆ

ಶರಧರ ಅಭಿನವ ಪ್ರಾಣೇಶವಿಟ್ಠಲನ 

ಕರುಣದಿಂ ಸುರ ಕಾರ್ಯ ಮಾಳ್ಪ ವಿಪದೇವ ॥ 3 ॥ 


 ಅಟ್ಟತಾಳ 


ಮುರಹರ ಶಿರಿ ಸತ್ಯಭಾಮ ದೇವಿಯ ಪೊತ್ತು

ಸುರತರು ಪಾರಿಜಾತವ ತರಲೋಸುಗ

ಹರಿ ಹಯಪುರ ಹೊಕ್ಕು ಕಿತ್ತಿ ಪೊತ್ತುತಂದ 

ಪರಮ ಸಮರ್ಥನೆ ಚರಣಕೆ ವಂದನೆ

ಅರಿಧರ ಅಭಿನವ ಪ್ರಾಣೇಶವಿಟ್ಠಲನ 

ಚರಣದೂಳಿಗಕಾರ ಉರಗಾರಿ ವೀರ ॥ 4 ॥ 


 ಆದಿತಾಳ 


ಕಾಲನಿಯಾಮಕ ಹರಿ ಪದಸೇವಕ

ಕಾಲೋತ್ಪಾದಕ ಹರಿ ಗುಣಗಾಯಕ

ಕಾಲಾಂತರ್ಗತ ಹರಿ ಗುಣೋಪಾಸಕ

ಕಾಲಮೂರ್ತಿ ಹರಿ ಚರಣಾರಾಧಕ

ಕಾಲ ಕಾಲ ಹರಿಪದ ಸಂಚಾರಕ

ಪಾಲಕ ಅಭಿನವ ಪ್ರಾಣೇಶವಿಟ್ಠಲನ 

ಕಾಲ ಕಾಲಕೆ ಭಜಿಪ ಬುದ್ಧಿ ಕೊಡು ವೀಂದ್ರ ॥ 5 ॥ 


 ಜತೆ 


 ಕಾಲ ಮೂರ್ತ್ಯಾಭಿನವ ಪ್ರಾಣೇಶವಿಟ್ಠಲನ 

ಮೇಲು ಮೂರುತಿ ತೋರು ಕಾಲನಾಮಕನೆ ॥

Comments

Popular posts from this blog

Kaksha Taratamya