ENU SUKRUTAVA MADIDALO
ಏನು ಸುಕೃತವ ಮಾಡಿದಳೋ ತಾ ಯಶೋದೆ ಶ್ರೀನಿಧಿಯಾದ ಕೃಷ್ಣನ್ನ ಕರೆದು ಮುದ್ದಿಸುವಳಂತೆ || ಪ || ಗಂಗಾಜನಕನಿಗೆ ಗಡಿಗೆ ನೀರೆರೆವಳಂತೆ | ಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆ | ತುಂಗ ಭೂಧರನ್ನ ತೊಟ್ಟಿಲೊಳು ತೂಗುವಳಂತೆ | ಕಂಗಳಿಗಗೋಚರನ ಕರೆದಪ್ಪಿಕೊಂಬಳಂತೆ || 1 || ನಗವನೆತ್ತಿದವನ ಮಗುವೆಂದೆತ್ತುವಳಂತೆ | ನಿಗಮಗೋಚರನ ತಾ ನಿಟ್ಟಿಪಳಂತೆ | ಅಗಣಿತ ಸತ್ವನ್ನ ಹಗ್ಗದಿ ಕಟ್ಟುವಳಂತೆ | ಮಿಗೆ ನಿತ್ಯತೃಪ್ತಗೆ ಪಾಲನೆರೆವಳಂತೆ || 2 || ಬಹುಮುಖನಿಗೆ ಭಾಮೆ ಮುದ್ದುಕೊಡುವಳಂತೆ ಅಹಿತಲ್ಪನಿಗೆ ಹಾವ ತುಳಿದೀಯೆಂಬಳಂತೆ | ಮಹಾದೈತ್ಯದಲ್ಲಣನಿಗೆ ಬಹು ಭಯವ ತೋರುವಳಂತೆ | ಮಹಿಮ ನರಸಿಂಹಗೆ ಗುಮ್ಮನ ತೋರುವಳಂತೆ || 3 || ಚತುರ್ಮುಖಪಿತನ ಸುತನೆಂದೆತ್ತುವಳಂತೆ | ಶ್ರುತಿವಿನುತಗೆ ಜೋಗುಳ ಪಾಡುವಳಂತೆ | ಶತರವಿತೇಜಗಾರತಿಯನೆತ್ತುವಳಂತೆ | ಗತಭೀತನಿಗೆ ಭಾಮೆ ರಕ್ಷೆಯಿಕ್ಕುವಳಂತೆ || 4 || ಕಡೆಗೋಲ ನೇಣ ಕೈಯಲಿ ಪಿಡಿದೊಲವಿಂದ | ಪಡುಗಡಲತಡಿಯ ದ್ವಾರಕೆನಿಲಯ | ಬಿಡದೆ ನೆಲೆಸಿದ ಹಯವದನ ಮುದ್ದು | ಉಡುಪಿನ ಕೃಷ್ಣನ ಉಡಿಯೊಳೆತ್ತುವಳಂತೆ || 5 ||