SRI TULASI MAHIMA STOTRA PADA


ಶ್ರೀ ವಿಜಯದಾಸಾರ್ಯ ವಿರಚಿತ 

 ಶ್ರೀ ತುಳಸೀ ಮಹಿಮಾ ಸ್ತೋತ್ರ 


 ರಾಗ ಭೌಳಿ 

ಶ್ರೀ ತುಳಸಿಯ ಸೇವಿಸಿ ॥ ಪ ॥
ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ
ಗಾತರದ ಮಲವಳಿದು ಮಾತೆಯೆಂಬನಿತರೊಳು
ಪಾತಕ ಪರಿಹರಿಸಿ ಪುನೀತರನು ಮಾಡುವಳು ಯಾತಕನುಮಾನವಯ್ಯ ॥ ಅ.ಪ ॥

ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿ 
ಪದುಮನಾಭನು ತಾನು ಉದುಭವಿಸಿ ಬರಲಂದು 
ಉದುರಿದುವು ಕಣ್ಣಿಂದ ಉದಕ ಉತ್ಸಹದಿಂದ
ಲದೆ ತುಳಸಿ ನಾಮನಾಗೆ ॥
ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು 
ಒದಗಿ ಸುಜನರು ತಮ್ಮ ಸದನದಲಿ ನಿತ್ಯ ಸ -
ತ್ಪದವಿಗೆ ಸಿದ್ಧವೆಂದು ಮುದದಿಂದ ತಿಳಿದು 
ವೃಂದಾವನ ರಚಿಸಿದರೈಯ ॥ 1 ॥

ಮೂಲದಲಿ ಸರ್ವ ತೀರ್ಥಗಳುಂಟು ತನ್ಮಧ್ಯೆ 
ಕಾಲ ಮೀರದೆ ಸರ್ವ ನದನದಿಗಳಮರಗಣ 
ಮೇಲೆ ದಳ ಒಂದರಲಿ ಒಂದೊಂದು ಮೂರುತಿಯು ವಾಲಯವಾಗಿಪ್ಪುದು ॥
ಮೂರ್ಲೋಕಗಳ ಧರ್ಮ ವ್ರತಕೆ ಮಿಗಿಲೆನಿಸುವುದು 
ನೀಲಮೇಘಶ್ಯಾಮಗರ್ಪಿಸಿದ ತುಳಸಿ ನಿ - 
ರ್ಮಾಲ್ಯವನು ಸತತ ಕರ್ಣದಲಿ ಧರಿಸಿದ ಮನುಜ ಕಾಲನಾಳಿಗೆ ಶೂಲನೊ ॥ 2 ॥

ಉದಯದೊಳಗೆದ್ದು ನೀರೆರೆದು ಮಜ್ಜನಗೈದು 
ತುದಿ ಬೆರಳಿನಿಂದ ಮೃತ್ತಿಕೆಯ ಫಣೆಯೊಳಗಿಟ್ಟು 
ಮುದದಿಂದಲೊಂದು ಪ್ರದಕ್ಷಿಣಿ ನಮಸ್ಕಾರ
ತದನಂತರದಲಿ ಭಜನೆ ॥
ವದನದೊಳು ಗೈಯೆ ಧರೆಯೊಳಗಿದ್ದ ಸರ್ವನದ - 
ನದಿಗಳಿಗೆ ನೂರ್ಮಡಿ ಯಾತ್ರೆ ಮಾಡಿದ ಫಲ 
ಒದಗುವುದು ಹಿಂದಣಾನಂತ ಜನ್ಮಗಳಘವ 
ತುದಿ ಮೊದಲು ದಹಿಪುದಯ್ಯ॥ 3 ॥

ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ 
ಆವವನ ಮನೆಯಲ್ಲಿ ಹರಿದಾಸರಾ ಕೂಟ 
ಆವವನ ಭುಜದಲ್ಲಿ ತಪ್ತಮುದ್ರಾಂಕಿತವು
ಪಾವಮಾನಿಯ ಮತದೊಳು ॥
ಆವವನು ಕಾಲತ್ರಯವ ಕಳೆವ ನಾವಲ್ಲಿ 
ಶ್ರೀ ವಾಸುದೇವ ಮುನಿದೇವಾದಿ ಗಣ ಸಹಿತ 
ಕಾವುತ್ತಲಿಪ್ಪ ಬಲಿಗೊಲಿದಂತೆ ತೊಲಗದಲೆ
ಭಾವಿಸಿರಿ ಭಾವಜ್ಞರು ॥ 4 ॥

ಕಂಡರೆ ದುರಿತಕ್ಕೆ ಕೆಂಡವನು ಬೀರುವುದು 
ಕೊಂಡಾಡಿದರೆ ಪುಣ್ಯವಪರಿಮಿತವುಂಟು ಮೈ - 
ದಿಂಡುಗೆಡಹಿದರೆ ಪುನರಪಿ ಜನನವಿಲ್ಲ ಸಲೆ 
ದಂಡ ವಿಟ್ಟವ ಮುಕ್ತನೊ ॥
ಚಂಡಾಲ ಕೇರಿಯೊಳು ಇರಲು ಹೀನಯವಲ್ಲ 
ಪಾಂಡುರಂಗ ಕ್ಷೇತ್ರ ಸರಿಮಿಗಿಲು ಎನಿಸುವುದು 
ತಂಡ ತಂಡದ ಕುಲಕೆ ಅವರವರ ಯೋಗ್ಯ ಫಲ ಕಂಡವರಿಗುಂಟೆ ಅಯ್ಯ ॥ 5 ॥

ಚಿತ್ತ ಶುದ್ದನು ಆಗಿ ಮುಂಝಾನೆಯೊಳು ತುಳಸಿ 
ಸ್ತೋತ್ರವನೆ ಮಾಡುತ್ತ ದಿವ್ಯವಾಗಿಹ ತ್ರಿದಳ 
ಪ್ರತ್ಯೇಕ ಪಾತ್ರೆಯಲಿ ತೆಗೆದು ಶೋಧಿಸಿ ತುಂಬಿ 
ವಿತ್ತಾದಿಯಲಿ ತಾರದೆ ॥
ಮತ್ತೆ ವಸ್ತ್ರದಿ ಹಸ್ತ ಶಿಲೆಯರ್ಕ ಏರಂಡ 
ಪತ್ರದಲಿ ತಾರದಲೆ ಭೂಮಿಯೊಳಗಿಡದೆ ಪೂ - 
ರ್ವೋತ್ತರಭಿಮುಖನಾಗಿ ಭಕ್ತಿಯಿಂ ತರಬೇಕು 
ಹೊತ್ತು ಮೀರಿಸಲಾಗದೊ ॥ 6 ॥

ಕವಿ ಮಂಗಳವಾರ ವೈಧೃತಿ ವ್ಯತೀಪಾತ
ರವಿ ಶಶಿಯ ಸಂಗಮ ಪರ್ವಣಿ ಪುಣ್ಯಕಾಲ
ದಿವಸ ದ್ವಾದಶಿ ಶ್ರೇಷ್ಠ ಉಪರಾಗ ಪಿತೃಶ್ರಾದ್ಧ
ಇವುಗಳಲಿ ತೆಗೆಯಾದಿರಿ ॥
ನವವಸನ ಪೊದ್ದು ಊಟವ ಮಾಡಿ ತಾಂಬೂಲ -
ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ -
ಸುವುದುಚಿತವಲ್ಲೆಂದು ತಿಳಿದು ಕೊಂಡಾಡುತಿರಿ 
ದಿವಸ ದಿವಸಗಳೊಳಯ್ಯ ॥ 7 ॥

ದಳವಿದ್ದರೇ ಒಳಿತು ಇಲ್ಲದಿದ್ದರೆ ಕಾಷ್ಟ
ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು
ತುಳಸಿ ನಿರ್ಮಾಲ್ಯವಾದರು ತ್ರಿವಾರದಲಿ
ತೊಳೆ ತೊಳೆದು ಏರಿಸಬಹುದು ॥
ತುಳಸಿ ಒಣಗಿದ್ದರೂ ಲೇಶದೋಷಗಳಿಲ್ಲ
ತುಳಸಿ ವಿರಹಿತವಾದ ಪೂಜೆಯದು ಸಲ್ಲದು
ತುಳಸಿ ತುಳಸೀ ಎಂದು ಸ್ಮರಣೆಯಾದರು ಮಾಡಿ ಜಲಜಾಕ್ಷನರ್ಚಿಸಿರೈಯ್ಯ ॥ 8 ॥

ತುಳಸಿ ಇಲ್ಲದ ಸದನ ಹೊಲೆಮಾದಿಗರ ಸದನ
ತುಳಸಿ ಇಲ್ಲದ ಬೀದಿ ನರಕಕೆಳಸುವ ಹಾದಿ
ತುಳಸಿ ಇಲ್ಲದ ತೀರ್ಥವೆಂದಿಗಿದ್ದರು ವ್ಯರ್ಥ 
ತುಳಸಿ ಬಲು ಪ್ರಾಧಾನ್ಯವೊ ॥
ತುಳಸಿ ಮಿಶ್ರಿತವಾದ ನೈವೇದ್ಯ ಗತಿಸಾದ್ಯ
ತುಳಸಿ ಧರಿಸಿದ ದೇಹ ಪರಮ ಸಾರ್ಥಕವಯ್ಯ
ತುಳಸಿದಳ ಹರಿಗೆ ಅರ್ಪಿಸಿದವನ ಪುಣ್ಯಕ್ಕೆ
ನೆಲೆಯ ನಾ ಕಾಣೆನಯ್ಯ ॥ 9 ॥

ಶಿವನ ಸತಿ ಪ್ರಹ್ಲಾದ ನಾರದ ವಿಭೀಷಣನು
ಧ್ರುವ ಅಂಬರೀಷ ಶಶಿಬಿಂದು ರುಕ್ಮಾಂಗದನು
ಇವರೆ ಮೊದಲಾದವರು ಭಕ್ತಿಪೂರ್ವಕದಲಿ
ವಿವರವನು ತಿಳಿದರ್ಚಿಸಿ ॥
ತವಕದಿಂ ತಂತಮ್ಮ ಘನ ಪದವನೈದಿದರು
ಭುವನದೊಳಗುಳ್ಳ ನಿರ್ಮಲ ಜನರು ಭಜಿಸಿದರು
ಜವಭಟರನೋಡಿಸೀ ಜಡದೇಹವನು ನೀಗಿ 
ಭವದೂರರಾದರೈಯ ॥ 10 ॥

ಉದಯಕಾಲದೊಳೆದ್ದು ಆವನಾದರು ತನ್ನ
ಹೃದಯ ನಿರ್ಮಲನಾಗಿ ಭಕುತಿಪೂರ್ವಕದಿಂದ
ಸದಮಲಾ ತುಳಸಿಯನು ಸ್ತೋತ್ರಮಾಡಿದ ಕ್ಷಣಕೆ 
ಮದಗರ್ವ ಪರಿಹಾರವೊ -॥
ಇದೆ ತುಳಸಿ ಸೇವಿಸಲು ಪೂರ್ವದಲಿ ಕಾವೇರಿ
ನದಿಯ ತೀರದಲೊಬ್ಬ ಭೂಸುರ ಪದಕೆ ಪೋದ
ಪದಪದೆಗೆ ಸಿರಿ ವಿಜಯವಿಠ್ಠಲಗೆ ಪ್ರಿಯಳಾದ 
ಮದನತೇಜಳ ಭಜಿಸಿರೈಯ ॥ 11 ॥

Comments

Popular posts from this blog

Kaksha Taratamya