HENDIRANALUVALI KANNIKE

 ಶ್ರೀ ಪುರಂದರದಾಸರ ಕೃತಿ


ಹೆಂಡಿರನಾಳುವಳೀ ಕನ್ನಿಕೆ - 
ಗಂಡನಿಲ್ಲದ ಹೆಂಗಸೀ ಕನ್ನಿಕೆ॥ಪ॥


ಮೇರುಮಂದರವ ಕಡಗೋಲನೇ ಮಾಡಿ
ಉರಗ ವಾಸುಕಿಯನ್ನೆ ನೇಣ ಮಾಡಿ
ಕ್ಷೀರಾಂಬುಧಿ ಸುರರಸುರರು ಮಥಿಸಲು
ಕೂರ್ಮ ರೂಪವ ಧರಿಸಿದ ಕನ್ನಿಕೆ॥೧॥

ಶಿಶುರೂಪವ ತಾಳಿ ಆಲದೆಲೆಯ ಮೇಲೆ
ಅಸಮಯ ಜಲದೊಳ್ ಮಲಗಿಕೊಂಡು
ವಶವಾಗದ ಮುನ್ನಾ ಹೂವಿನ್ಹೊಕ್ಕಳಲ್ಲಿ
ಬಸುರಿಂದ ಬೊಮ್ಮನ ಪಡದಾ ಕನ್ನಿಕೆ॥೨॥

ಪಟ್ಟಾವಳಿಯನುಟ್ಟು ಬೊಟ್ಟ ಕುಪ್ಪುಸ ತೊಟ್ಟು
ಬೊಟ್ಟ ಕೈಯ ಪಿಡಿದುಕೊಂಡು
ದಿಟ್ಟ ಸ್ತ್ರೀರೂಪವ ತಾಳಿ ದೈತ್ಯರನೆಲ್ಲ 
ಅಟ್ಟಹಾಸದಿ ಮೋಹಿಸಿದ ಕನ್ನಿಕೆ॥೩॥

ಅಂಥ ಇಂಥವನೆಂದು ಕೇಳುತ್ತ ಇರಲಾಗಿ
ಸಂತತ ಸುರರಿಗೆ ಅಮೃತವನ್ನು
ಮುಕ್ತಿಯೊಳಗೆ ಅಳವಡಿಸದೆ ಬಡಿಸಿದ
ಎಂಥಾ ಸೊಬಗಿನ ಮೋಹದ ಕನ್ನಿಕೆ॥೪॥

ಬೇಗೆಗಣ್ಣನಿಗೆ ಬಿಸಿಕೈಯನಿಡಲು ಬರೆ
ಭೋಗದಾಸೆಯ ತೋರಿ ಬೂದಿ ಮಾಡ್ದಾ
ಭಾಗೀರಥಿಯ ಪಿತ ಪುರಂದರವಿಠಲ
ಭೋಗಿ ಬೇಲೂರ ಚನ್ನಿಗ ಕನ್ನಿಕೆ॥೫॥

Comments

Popular posts from this blog

Kaksha Taratamya