ENTHA PAVANA PADAVO

ಎಂಥಾ ಪಾವನ ಪಾದವೊ ರಂಗಯ್ಯ
ಇನ್ನೆಂಥಾ ಚೆಲುವ ಪಾದವೊ |ಪ|

ಎಂಥಾ ಪಾವನ ಪಾದ ಇಂತು ಜಗದಿ ಕೇಳು
ಪಂಥದೊಳಿಹ ಕುರುಪತಿಯನುರುಳಿಸಿದಾ |ಅ.ಪ|

ಹಲವು ಕಾಲಗಳಿಂದ ಮಾರ್ಗದಿ
ಶಿಲೆ ಶಾಪ ಪಡೆದಿರಲು|
ಒಲಿದು ರಜದಿ ಪಾವನಗೈದು ಕರುಣದಿ
ಶಿಲೆಯ ಬಾಲೆಯ ಮಾಡಿ ಸಲಹಿದ ಹರಿಯ|| 1

ಬಲಿಯ ದಾನವ ಬೇಡಿ ತ್ರೈಲೋಕ್ಯವ
ನಳೆದು ಏಕೆಂಘ್ರಿಯಲಿ|
ಬೆಳೆದು ಭೇಧಿಸಲಾಗ ನಳಿನಜಾಂಡವು ಸೋಕೆ
ಚೆಲುವ ಗಂಗೆಯ ಪೆತ್ತ ಜಲಜಾಸನಾರ್ಚಿತ|| 2

ಚೆಂಡು ತರುವ ನೆವದಿ ಕಾಳಿಂಗನು-
ದ್ದಡ ಮಡುವ ಧುಮುಕಿ|
ಚಂಡ ಕಾಳಿಂಗನ ಮಂಡೆಯೊಳಗೆ ಪಾದ-
ಪುಂಡರೀಕವನಿಟ್ಟು ತಾಂಡವವಾಡಿದ|| 3

ಸಂತತ ಸೌಖ್ಯವೆಂಬ ಕಾವೇರಿಯ
ಅಂತರಂಗದಿ ನೆಲೆಸಿ|
ಸಂತೋಷದಿಂದ ಅನಂತನ ಮೇಲೆ ನಿ-
ಶ್ಚಿಂತೆಯೊಳ್ ಲಕುಮಿ ಭೂಕಾಂತೆರು ಸೇವಿಪ|| 4

ಒಲಿದು ಗಯಾಸುರನ ಶಿರದೊಳಿಟ್ಟು
ಹಲವು ಭಕ್ತರ ಪೊರೆದ|
ನೆಲೆಸಿ ಉಡುಪಿಲಿ ಎನ್ನ ಹೃದಯ ಕಮಲದಲ್ಲಿ
ತೊಲಗದೆ ಇರುತಿಪ್ಪ ಸುಲಭ ಹಯವದನ || 5

Comments

Popular posts from this blog

Kaksha Taratamya