Ibharampura Apparavaru - Short Summary
ಶ್ರಾವಣ ಶುದ್ಧ ತೃತೀಯಾ ಶ್ರೀಮದ್ ಅಪ್ಪಾವರ ಆರಾಧನ ಮಹೋತ್ಸವ , ಇಭರಾಮಪುರ
श्रीरामचरणद्वन्द्ववर्धिचंद्रो दयोपमः |
श्रीकृष्णपूजानिरतः कृष्णोमाम्सर्वदावतु ||
ಮಂತ್ರಾಲಯ ಶ್ರೀ ಗುರುಸಾರ್ವಭೌಮರ ಏಕಾಂತಭಕ್ತರಾದ ಅಪರೋಕ್ಷ ಜ್ಞಾನಿಗಳಾದ , ನಿರಂತರ ಪರಿಮಳ ಗ್ರಂಥ ಪಾರಾಯಣದಿಂದ ಸ್ನಾನ ಮಾಡಿ ನೀರಿನಲ್ಲಿ ಪರಿಮಳ ತೋರಿದ, ಜ್ಞಾನಿಶ್ರೇಷ್ಠರೆನಿಸಿದ ಯಳಮೇಲಿ ಹಯಗ್ರೀವಾಚಾರ್ಯ , ಯಳಮೇಲಿ ವಿಠಲಾಚಾರ್ಯ, ಶ್ರೀ ಗಣೇಶಾಚಾರ್ಯ(ಶ್ರೀ ಸುಧರ್ಮೇಂದ್ರ ತೀರ್ಥರು) ಶ್ರೀ ಯೋಗಿ ನಾರಾಯಣಾಚಾರ್ಯ, ಮುಂತಾದ ಜ್ಞಾನಿಗಳ ಸಮೂಹಕ್ಕೆ ಗುರುಗಳೆನಿಸಿದ, ವಿಜಯರಾಮಚಂದ್ರವಿಠಲ ದಾಸರು , ಜಯೇಶವಿಠಲ ದಾಸರು, ಸುರಪುರ ಆನಂದ ದಾಸರು , ಶ್ರೀ ಇಂದಿರೇಶ ದಾಸರು, ಗುರುಜಗನ್ನಾಥ ದಾಸರಂತಹ ದಾಸ ಶ್ರೇಷ್ಠರಿಗೆ ಭಕ್ತಿ ಮಾರ್ಗವನ್ನು ತೋರಿ ಅವರ ಸ್ವರೂಪೊದ್ದಾರಕರಾಗಿ ಹರಿದಾಸರಿಗೆ ಮಂದಿರವೆನಿಸಿದ , ಶ್ರೀ ಇಭರಾಮಪುರ ಅಪ್ಪಾವರ ಆರಾಧನೆ ಮಹೋತ್ಸವ.
ಶ್ರೀ ಅಪ್ಪಾವರ ಸಂಕ್ಷಿಪ್ತ ಮಾಹಿತಿ :
ಜನನ : 1789 ವಿಜಯ ದಶಮಿ
ತಂದೆ : ಶ್ರೀ ಅಹೋಬಲಾಚಾರ್ಯ
ತಾಯಿ : ಕೃಷ್ಣ ಬಾಯಿ
ಜನ್ಮ ಸ್ಥಳ : ಇಭರಾಮಪುರ ( ಜಿಲ್ಲೆ : ಕರ್ನೂಲು, ಆಂಧ್ರಪ್ರದೇಶ್ )
ಉಪದೇಶಿತ ಗುರು : ಅಶ್ವತ್ಥಾಮಾಚಾರ್ಯರು
ಕುಲ ಗುರುಗಳು : ಶ್ರೀರಾಘವೇಂದ್ರ ಗುರುಸಾರ್ವಭೌಮರು
ಸಮಕಾಲೀನ ಅಪರೋಕ್ಷ ಜ್ಞಾನಿಗಳು ಮತ್ತು ದಾಸರು :
ಸುರಪುರದ ಆನಂದ ದಾಸರು , ಯೋಗಿ ನಾರಾಯಣ ಆಚಾರ್ಯ , ಮೊದಲಕಲ್ಲು ಶೇಷದಾಸರು , ವಿಜಯರಾಮಚಂದ್ರ ವಿಠಲರು , ಸುಜ್ಞಾನೇಂದ್ರ ತೀರ್ಥರು , ಗಣೇಶಾಚಾರ್ಯರು (ಸುಧರ್ಮೇಂದ್ರ ತೀರ್ಥರು) , ಯಳಮೇಲಿ ಹಯಗ್ರೀವಾಚಾರ್ಯರು , ಹುಲಗಿ ನರಸಪ್ಪಾಚಾರ್ಯರು ,ಗುರುಜಗನ್ನಾಥ ದಾಸರು.
ಶ್ರೀ ಅಪ್ಪಾವರಿಗೆ ಶ್ರೀ ಮಂತ್ರಾಲಯ ಪ್ರಭುಗಳ ಮೇಲೆ ಅಪರಿಮಿತವಾದ ಭಕ್ತಿ. ಶ್ರೀ ರಾಯರು ಸಹ ಶ್ರೀ ಅಪ್ಪಾವರ ಮೇಲೆ ಅತ್ಯಂತ ಅಂತಃಕರಣ - ಪ್ರೀತಿ - ಮಾತೃವಾತ್ಸಲ್ಯ ತೋರುತ್ತಿದ್ದರು. ಇವರಿಬ್ಬರ ಸಂಬಂಧ ಹಸು - ಕರುವಿನ ಸಂಬಂಧ.
ಶ್ರೀ ರಾಯರೂ ಶ್ರೀ ಅಪ್ಪಾವರ ವಿಷಯದಲ್ಲಿ ಅತ್ಯಂತ ಪ್ರಸನ್ನರಾಗಿದ್ದರು.
ಶ್ರೀ ರಾಯರು ನಡೆಸುವ ಸಕಲ ವ್ಯಾಪಾರವೂ ಶ್ರೀ ಅಪ್ಪಾವರಿಗೆ ಮೊದಲೇ ತಿಳಿದಿರುತ್ತಿತ್ತು.
ಶ್ರೀ ರಾಘವೇಂದ್ರ ಚಿತ್ತಜ್ಞಂ ಸಾರಮಾತ್ರ ವದಾವದಂ ।
ದೂರೀಕೃತ ದುರಾಚಾರಂ ಕೃಷ್ಣಾಚಾರ್ಯ ಗುರುಂಭಜೇ ।।
ಅಗಮ್ಯ ಮಹಿಮರೆಂದು ಜಗತ್ಪ್ರಸಿದ್ಧರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಮಹಿಮೆಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವ ಸಾಮರ್ಥ್ಯ ಉಳ್ಳವರಾದರಿಂದ " ಶ್ರೀ ರಾಘವೇಂದ್ರ ಚಿತ್ತಜ್ಞಂ " ಎಂದು ಹೆಸರು ಪಡೆದರು.
ಶ್ರೀ ಅಪ್ಪಾವರಿಂದ ಅನುಗ್ರಹೀತರಾದ ದಾಸರು ಮತ್ತು ಜ್ಞಾನಿಗಳು
೧. ಶ್ರೀ ಗಂಧರ್ವಾಂಶ ಸಂಭೂತರಾದ ಸುರಪುರದ ಆನಂದದಾಸರು
೨. ಶ್ರೀ ಗುರು ಜಗನ್ನಾಥದಾಸರು
೩. ಅಪರೋಕ್ಷ ಜ್ಞಾನಿಗಳಾದ ವಿದ್ವಾನ್ ಶ್ರೀ ಯಳಮೇಲಿ ಹಯಗ್ರೀವಾಚಾರ್ಯರು
೪. ವಿದ್ವಾನ್ ಯಳಮೇಲಿ ವಿಠಲಾಚಾರ್ಯರು
೫. ಶ್ರೀ ವಿಜಯರಾಮಚಂದ್ರದಾಸರು
೬. ಶ್ರೀ ಜಯೇಶವಿಠಲರು
೭. ಶ್ರೀ ಕಾರ್ಪರ ನರಹರಿ ದಾಸರು
೮. ಶ್ರೀ ಮುದ್ದು ಭೀಮಾಚಾರ್ಯರು
೯. ಬೇಲೂರು ಕೇಶವ ದಾಸರು
೧೦. ಶ್ರೀ ಯೋಗಿ ನಾರಾಯಣಾಚಾರ್ಯರು
೧೧. ಶ್ರೀ ಇಂದಿರೇಶ ದಾಸರು
೧೨. ಶಿರಹಟ್ಟಿ ಭೀಮಾಚಾರ್ಯರು
ಶ್ರೀ ಯೋಗಿ ನಾರಾಯಣಾಚಾರ್ಯರಿಂದ ರಚಿತವಾದ " ಶ್ರೀ ಇಭರಾಮಪುರದ ಕೃಷ್ಣಾಚಾರ್ಯ ಸ್ತೋತ್ರ" ದಲ್ಲಿ ಶ್ರೀ ಅಪ್ಪಾವರ ಮಹಿಮೆಗಳು ಶೃತಿ - ಸ್ಮೃತಿ - ಪುರಾಣೋಕ್ತಿಗಳಿಗೆ ಸಮ್ಮತವೆಂದೂ; ಭಾಗವತ - ಭಾರತ - ಛಾಂದೋಗ್ಯಾದಿ ಉಪನಿಷತ್ತುಗಳಲ್ಲಿ ವರ್ಣಿಸಲ್ಪಟ್ಟಿವೆಂದು ಸ್ಪಷ್ಟಪಡಿಸಿದ್ದಾರೆ.
ಮಹಿಮೆಗಳು ಮಹಾಪೂರ
- ಕೊಪ್ಪರ ಅರ್ಚಕರಿಗೆ ಸಂತಾನ ಅನುಗ್ರಹ
- ಶ್ರೀ ರಾಘವೇಂದ್ರ ಚಿತ್ತಜ್ಞಂ. ಶ್ರೀ ಗುರುಸಾರ್ವಾಭೌಮರು ನಡೆಸುವ ಸಕಲ ವ್ಯಾಪಾರವೂ ಶ್ರೀ ಅಪ್ಪಾವರಿಗೆ ಮೊದಲೇ ತಿಳಿದಿರುತ್ತಿತ್ತು.
- ದೇಹದಿಂದ ಘಮಘಮಿಸುವ ಪರಿಮಳ,
ಶ್ರೀರಂಗ ಪಟ್ಟಣದಲ್ಲಿ ಪರೀಕ್ಷೆ ಮಾಡಲು ಬಂದ ಮೂರ್ಖರಿಗೆ ಕಾವೇರಿ ನದಿಯಲ್ಲಿ ಸಂಪೂರ್ಣ ಘಮಘಮಿಸುವ ಪರಿಮಳ ತೋರಿಸಿದರು.
- ಇಭರಾಮಪುರದಲ್ಲೇ ಇದ್ದು ಹಂಪಿ ಜಾತ್ರೆ ತೋರಿಸಿದರು
- ಗುರು ಜಗನ್ನಾಥ ದಾಸರಿಗೆ ಅನುಗ್ರಹ.
- ಮೈಸೂರು ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರಿಗೆ ಅವರ ಪೂರ್ವ ಜನ್ಮದ ವೃತಾಂತ ತಿಳಿಸಿ ರಾಜರಿಗೆ ಅನುಗ್ರಹ
- ಮೈಸೂರು ಅರಮನೆಯಲ್ಲಿ ಪಾಂಡವ ಪೂಜಿತ ಅರ್ಜುನ ಕರಾರ್ಚಿತ ಪಂಚಮುಖಿ ಪ್ರಾಣ ದೇವರು ಪ್ರಾಪ್ತಿ
- ಮೈಸೂರು ಶ್ರೀ ವಿಜಯರಾಮಚಂದ್ರ ದಾಸರಿಗೆ ಅನುಗ್ರಹ
- ಗದುಗ ದರ್ಶನ ವೀರ ನಾರಾಯಣನ ಜೊತೆ ಸಂದರ್ಶನ
- ಗದುಗಿನಲ್ಲಿ ತಮ್ಮ ಯೋಗ ಶಕ್ತಿಯಿಂದ ವೀರನಾರಾಯಣನನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದ ಶ್ರೀ ಯೋಗಿ ನಾರಾಯಣಾಚಾರ್ಯರನ್ನು ತಮ್ಮ ಶಿಷ್ಯರಾಗಿ ಸ್ವೀಕಾರ.
- ಗದುಗಿನಲ್ಲಿ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಮೃತಿಕ ಬೃಂದಾವನ ಪ್ರತಿಷ್ಠಾಪನೆ
- ನಂದವಾರ ದೇಸಾಯಿ ವಂಶಸ್ಥರಿಗೆ ಸಂತಾನ ಅನುಗ್ರಹ
- ಸ್ವಪ್ನದಲ್ಲಿ ಸಕಲ ತೀರ್ಥ ಯಾತ್ರೆ
- ಭವಾನಿ ಭುಜಂಗರಾಯರ ಪುತ್ರರಿಗೆ ಪ್ರಾಣದಾನ
- ಬೇಲೂರು ಕೇಶವ ದಾಸರ ತಂದೆಗೆ ಸಂತಾನದ ಅನುಗ್ರಹ
- ಭವಿಷ್ಯವಾಣಿ - ರಿತ್ತಿ ಗಣೇಶಾಚಾರ್ಯರಿಗೆ ರಾಯರ ಪೀಠದಲ್ಲಿ ವಿರಾಜಮಾನರಾಗುತ್ತಾರೆ ,ಅವರೇ ಮುಂದೆ ಹಂಸ ನಾಮಕ ಪರಮಾತ್ಮನ ಸಾಕ್ಷಾತ್ ಪರಂಪರೆಯಾದ ಶ್ರೀಮನ್ ಮಧ್ವಾಚಾರ್ಯ ಮೂಲಮಹಾಸಂಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಸುಧರ್ಮೇಂದ್ರ ತೀರ್ಥರು ಎಂದು ಜಗನ್ಮಾನ್ಯರಾದರು.
- ಮಂತ್ರಾಕ್ಷತೆಯಿಂದ ಕುಷ್ಠಾಧಿ ರೋಗ ಪರಿಹಾರ.
- ಮಂತ್ರಾಕ್ಷತೆಯ ಬಲದಿಂದ ಮೈಸೂರು ಅರಮನೆಯಲ್ಲಿ ಬ್ರಹ್ಮ ಪಿಶಾಚಿ ನಿವಾರಣೆ
- ಲಕ್ಷ ವಿಪ್ರ ಬ್ರಾಹ್ಮಣ ಭೋಜನ.
- ಕುಂಪಿಣಿಪುರ ಗ್ರಾಮದಲ್ಲಿ ಸ್ವಯಂ ಉದ್ಭವ ಮುಖ್ಯ ಪ್ರಾಣದೇವರ ಪ್ರತಿಷ್ಠಾಪನೆ.
- ಗದ್ವಾಲ್ ಸಂಸ್ಥಾನದಲ್ಲಿ ಉಂಟಾದ ಕ್ಷಾಮ ನಿವಾರಣೆ.
- ಗದ್ವಾಲ್ ಅಗ್ರಹಾರದಲ್ಲಿ ಅಡಗಿಕೊಂಡಿದ ಪ್ರಾಣದೇವರು, ಅಪ್ಪಾವರ ಪ್ರಾರ್ಥನೆಮೇರೆಗೆ , ಗದ್ವಾಲಿಂದ ಇಭರಾಮಪುರಕೆ ಬಂದು ನೆಲೆಸಿದ್ದು.
- ಸರ್ವವಿದ್ಯಾ ಪಾರಂಗತರಾದ ಅಪ್ಪಾವರನು ಪರೀಕ್ಷಿಸಲು ಬಂದ ರಾಮಚಾರ್ಯ ಎಂಬ ಪಂಡಿತರಿಗೆ ತಮ್ಮ ಮನೆಯಲ್ಲಿ ನೀರು ತರುವವನ ಹತ್ತಿರ ,ಶ್ರೀ ಅಪ್ಪಾವರು ತಮ್ಮ ಕೈಯಿಂದ ಬೆನ್ನು ತಟ್ಟಿ ಅಶಕ್ತನಾದವನ ಕಡೆಯಿಂದ ಆ ಪಂಡಿತನಿಗೆ ಶ್ರೀಮನ್ ನ್ಯಾಯಸುಧಾ ಪರಿಮಳ ಗೊತ್ತಿಲ್ಲದ ಪ್ರಮೇಯ ವಿಷಯಗಳನು ಮನದಟ್ಟು ಮಾಡಿಕೊಟ್ಟು ಅಪ್ಪಾವರು ತಮ್ಮ ಸಾಮರ್ಥ್ಯವನ್ನು ತೋರಿಸಿ ಪಾಂಡಿತ್ಯದ ಗರ್ವಭಂಗ ಮಾಡಿ ಅನುಗ್ರಹಿಸಿದ್ದು.
- ಹುಲಿ ಮರಡಿಯ ಬೆಟ್ಟದಲ್ಲಿ ತಾವೇ ಹುಲಿಯಾಗಿ ಅಲ್ಲಿಯ ವ್ಯಾಘ್ರ ಭಾದೆ ತಪ್ಪಿಸಿ ಅಲ್ಲಿ ಜನರಿಗೆ ಅನುಗ್ರಹ.
- ಸುರಪುರದ ಆನಂದ ದಾಸರಿಗೆ ತಮ್ಮ ಸ್ವರೂಪ ತಿಳಿಸಿಕೊಟ್ಟು ತಮ್ಮ ಶಿಷ್ಯರಾಗಿ ಸ್ವೀಕಾರ.
- ಸಮಕಾಲೀನ ಎಲ್ಲಾ ಹರಿದಾಸರು , ಅಪರೋಕ್ಷ ಜ್ಞಾನಿಗಳಿಗೆ ಸ್ವರೂಪೊದ್ದಾರಕರಾಗಿ ಹರಿದಾಸರಿಗೆ ಮಂದಿರ ಎಂದು ಬಿರುದು.
ಸುರಪುರದ ಆನಂದ ದಾಸರು ತಮ್ಮ ಸ್ವರೂಪೋದ್ಧಾರಕ ಗುರುಗಳಾದ ಶ್ರೀ ಅಪ್ಪಾವರು, ಶ್ರೀ ರಾಯರ ದಯಾಳುತ್ವವನ್ನು ಸ್ಮರಿಸುತ್ತಾ ಅವರ ಕಾಲದಲ್ಲಿ ಶ್ರೀ ರಾಯರ ಅಂತರಂಗ ಭಕ್ತರು ಹಾಗೂ ಅಪರೋಕ್ಷ ಜ್ಞಾನಿಗಳನು ಗುರುತಿಸಿ ರಚಿಸಿದ ಕೀರ್ತನೆ.
ಶ್ರೀ ರಾಘವೇಂದ್ರರಾಯರ ಪಾದಾಂಬುಜ ।
ದಾರಾಧಕರ ಕೊಂಡಾಡಿರೋ ।। ಪಲ್ಲವಿ ।।
ನಾರಾಯಣ ನಾಮ ಪಾರಾಯಣರ । ಪಾ ।
ದಾರವಿಂದ ಸುಧಾ ರಸವ ಬೀರುವಾ ।। ಅ. ಪ ।।
ಅಲವಬೋಧ ಸತ್ಕುಲ ದೀಪರೆನಿಸಿದ ।
ಹುಲುಗಿಯ ನರಸಪ್ಪಾಚಾರ್ಯರ ।
ಕಲಿಯೊಳು ಕಲಿಕೃತ ಕಲ್ಮಶ ಕಳೆವೆ ।
ನಿರ್ಮಲ ರಾಯ್ಚೂರು ಕೃಷ್ಣಾಚಾರ್ಯರ ।।
ಇಳೆಯೊಳು ಚುಷಷ್ಠಿ ಕಳದಿ ನಿಪುಣರಾದ ।
ಯಳಮೇಲಿ ಹಯಗ್ರೀವಾಚಾರ್ಯರ ।
ಹಲವು ಸಜ್ಜನರೊಳು ತಿಳಿಸಿ ಕೊಳ್ಳದಲಿಪ್ಪ ।
ಬಲವಂತ ಯೋಗಿ ನಾರಾಯಣಾರ್ಯರ ।।
ಧರಣಿದೇವರಿಗೆ ನಿರುತಾನ್ನವನೀವ ।
ವರ ಹರಿಹರ ಭೀಮಾಚಾರ್ಯರ ।
ಹರಿದಾಸರಿಗೆ ಮಂದಿರವಾದ ।
ಇಭರಾಂಪುರದಲ್ಲಿ ಮೆರೆವ ಕೃಷ್ಣಾಚಾರ್ಯರ ।।
ಶಿರಿಪಾದ ಪುತ್ರ ಪಂಡಿತರೊಳಗಗ್ರೇ ।
ಸರ ಶ್ರೀ ರಂಗದ ರಾಮಾಚಾರ್ಯರ ।
ಸುರಪುರ ಶ್ರೀ ನರಹರಿಯ ಪಾದಾಂಬುಜ ।
ಸಿರಿಯೊಳ್ಮೆರೆವ ಅಸ್ಮದ್ಗುರು ರಾಜಾಚಾರ್ಯರ ।।
ಶ್ರೀ ರಾಘವೇಂದ್ರರಾಯರ ಭೂಮಿಯೊಳವ ।
ಮಾಡಿದ ಆರಂಭದಿಂ ।
ದಾರಾರು ಬೃಂದಾವನ ಪೂಜಾ ಸ್ತೋತ್ರದಿಂ ।
ದಾರಾಧಿಸುವರಾನಂದದಿ ।।
ಸಾರ ಭಕ್ತರ ಪಾದಾರವಿಂದಕೆ । ನಮ ।
ಸ್ಕಾರ ಮಾಡಿರೋ ಸಾಷ್ಟಾಂಗದಿ ।
ಧೀರ ಶ್ರೀ ಕಮಲೇಶವಿಠ್ಠಲ ವಲಿದು ತನ್ನ ।
ಸಾರೂಪ್ಯವ ಕೊಟ್ಟು ಸಲಹುವ ಸಂತತಾ ।।
ಅಪ್ಪಾವರ ಕಟ್ಟೆ:
ಶ್ರೀ ಅಪ್ಪಾವರು ನಿತ್ಯವೂ ಪಂಚಮುಖಿ ಮುಖ್ಯಪ್ರಾಣ ದೇವರ ಪೂಜೆ , ನಿತ್ಯ ಅನುಷ್ಠಾನ ಹಾಗೂ ಸುಧಾ ಪರಿಮಳಾದಿ ಗ್ರಂಥಗಳು ಪಾರಾಯಣ ಮಾಡಿದ ಸ್ಥಳ. ಶ್ರೀ ಅಪ್ಪಾವರ ತರುವಾಯ ಬಂದ ಭಕ್ತಾದಿಗಳ ಅನುಗ್ರಹಕಾಗಿ ಅಪ್ಪಾವರ ಶಿಷ್ಯರಾದ ಶ್ರೀ ಯೋಗಿ ನಾರಾಯಣಾಚಾರ್ಯರರು ಶಾಲಿಗ್ರಾಮ ಶಿಲೆಯಲ್ಲಿ ಶ್ರೀ ಅಪ್ಪಾವರ ಉಪಾಸ್ಯಮೂರ್ತಿಯಾದ ಚತುರ್ಭುಜ ವೇಣುಗೋಪಾಲ ಕೃಷ್ಣ ದೇವರು ಹಾಗೂ ಅಪ್ಪಾವರ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಿದ ಸ್ಥಳವೇ ಅಪ್ಪಾವರ ಕಟ್ಟೆ.
" ಶ್ರೀ ಕಾರ್ಪರ ನರಹರಿದಾಸರು "
ಸ್ಮರಿಸುವ ನರನೇ ಧನ್ಯ ಸನ್ಮಾನ್ಯ ||
ಸ್ಮರಿಸುವರಿಗೆ ಸುರತರುಕಲ್ಪ । ವಿ ।
ಭರಾಮಪುರದಿ ಶ್ರೀಹರಿ । ಧ್ಯಾನ ।
ಪರ ಶ್ರೀ ಕೃಷ್ಣಾಚಾರ್ಯರ ||ಅ.ಪ |
ಶ್ರೀ ಬಾದರಾಯಣವಿಠಲರು...
ಘನ್ನ ಭಕ್ತಿ ವಿರಕ್ತಿ ನೀಡುವುದರಲಿ ।
ಇನ್ನು ನಿನಗೆಣೆಗಾಣೆ ಪುಣ್ಯ ಪುರುಷ ।
ಪುನೀತ ಪೂರ್ಣ ಕಾರುಣ್ಯ ನಿರ್ದೋಷ ವೇಷಾ ।।
ಇಭರಾಮಪುರದರಸೆ ಈಪ್ಸಿತ ಫಲಪ್ರದ ।
ತ್ರಿಭುವನ ವ್ಯಾಪ್ತಿ ಸಿರಿ ವಿಷ್ಣುದರ್ಶಿ ।।
ಶ್ರೀ ಜಯೇಶವಿಠಲರು....
ಈ ಧರಣಿಯಲಿ ಕಲಿಯು ಬಾಧಿಸಲು ಸುಜ್ಞಾನ ।
ಮೇದಿನಿ ಸುರರೆಲ್ಲ ಮೊರೆಯಿಡಲು ಶ್ರೀ ರಮಣ ।
ಭೇದ ಸತ್ಯವ ತೋರೆ ಕೃಷ್ಣಾರ್ಯ ಪ್ರಭುವರನ ।
ಆದರದಿ ಕಳುಹಿದನು ನಿನ್ನ ಸಹಿತಾ ।।
ಅಗಮ್ಯ ಮಹಿಮನಾದ ವಾಯುವಾಹನ ತಮ್ಮ ಮೂಲಕ ಪ್ರಕಟಿಸಿದ ವಿವಿಧ ಮಹಿಮೆಗಳನ್ನು ಮೆಲಕು ಹಾಕಿದರು. ತಮ್ಮ ಮೇಲೆ ಶ್ರೀ ಪಂಚಮುಖಿ ಪ್ರಾಣದೇವರು ಸುರಿಸಿದ ಕಾರುಣ್ಯ ವೃಷ್ಟಿಯನ್ನು ಸ್ಮರಿಸಿ ಅವರ ಕಣ್ಣಲೆಗಳು ತೇಲಿ ಬಂದವು. ತಮ್ಮ ಜೀವನದಲ್ಲಿ ನಡೆದ ಸಕಲ ಕ್ರಿಯೆಗಳನ್ನೂ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನೃಸಿಂಹದೇವರಿಗೆ ಪಾದಾರವಿಂದಗಳಲ್ಲಿ ಸಲ್ಲಿಸಿ ” ಶ್ರಾವಣ ಶುದ್ಧ ತೃತೀಯಾ 1869 ಶ್ರೀ ಕೃಷ್ಣ ಪಾದಾರವಿಂದವನ್ನು ಸೇರಿದರು.
Comments
Post a Comment