Sakala Paapa Prayaschitha Sulaadi
ರಾಗ ಕಾಂಬೋಧಿ
ಝಂಪಿತಾಳ
ಮಂಜು ಕಿವಿ ಕಣ್ಣು ಕವಿದಾವು ಊರಾ
ಹಂಜಾ ವಾರ್ತಿಯ ತೊಲಗದು
ಮುಂಜರಗು ಹೆಂಗಳೆ ಬೀಸಲು
ಮುಂಜೋಣಿ ನೋಟವು ತಪ್ಪದು
ಸಂಜೆಯತನಕ ತಿನಲು ಹೀನರ
ಎಂಜಲಾಪೇಕ್ಷ ತಗ್ಗದು ತಗ್ಗದು
ಖಂಜಾತನವು ಬಂದು ಪ್ರಾಪ್ತವಾದೆಡೆ
ಅಂಜಸಾ ಸ್ಪರ್ಶಾ ಬಯಸುವೆ
ಮಂಜು ಕಿವಿ ಕಣ್ಣು ಕವಿದಾವು
ಅಂಜಿಕೆಯಿಲ್ಲ ಹಾಳು ಹರಟೆಗೆ
ಅಂಜುಳಿ ಮುಗಿದಾಡುವೆ
ಬಂಜೆ ಮನ ಇನ್ನು ದಣಿಯದು
ರಂಜಕ ಮುಟ್ಟಿಸಿದಂತೆ ಭವ -
ಪಂಜರದೊಳಗಾವಿಷ್ಟಾ
ರಂಜಣಿಗಿಯಲ್ಲಿ ಮಹಿಷಿ ಮೊಗವೆದ್ದಿ
ಗಂಜಿಮುಸರಿ ತೊಳೆದ ನೀರು
ಎಂಜಲಾ ದುರ್ವಾಸನೆ ಹೇಯಾ
ಗುಂಜಿಕೊಂಡು ಕುಡಿದಂತೆ
ನಂಜಿ ನಂಜಿ ಇರದೆ ವಿಷಯ
ಪುಂಜ ಸಮಗ್ರ ಸೇವಿಪೆ
ರಂಜಿಸುವ ಸುಕೃತ ಫಲ ಗುಲ -
ಗಂಜೆ ತೂಕ ಮಾಡಲಿಲ್ಲ
ಕಂಜನಾಭ ನಮ್ಮ ವಿಜಯವಿಟ್ಠಲ ನಿ -
ರಂಜನ ನೀನೆ ಗತಿಯೊ ॥ 1 ॥
ಮಟ್ಟತಾಳ
ಜೋಲು ಬಿದ್ದವು ಹುಬ್ಬು ಕಾಲು ಹಸ್ತದ ಚರ್ಮ
ಜೋಲುತದೆ ಸಂಧಿ ಕೀಲುಗಳು ಸಡಲಿ
ಕಾಲು ಕೋಲಾಯಿತು ನಾಲಿಗೆ ತೊದಲು ಜರೆ -
ಕಾಲ ಸುಕ್ಕಿದ ಗಲ್ಲ ಬೀಳುವಂತೆ ತಲೆ
ಓಲ್ಯಾಡುವ ನಡುಗು ಬಾಲತನದ ಬುದ್ಧಿ
ಲೋಲುಪ ಭವದ ಲೀಲೆ ಹಗಲು ಇರಳು
ಜೋಲೆಯೊಳಗೆ ಬಿದ್ದು ವ್ಯಾಳ್ಯೆ ತಿಳಿಯದಲೆ
ಮೂಲ ವಿಚಾರಿಸದೆ ಜಾಲ ದುಷ್ಕರ್ಮ ವಿ -
ಶಾಲ ಮಾಡುವೆ ಇನಿತು ಏಳುವಾ ಬಗಿ ಹಾಳಾದ ಕಾಲಕ್ಕೂ
ಆಳುತನದಿಂದ ಮೂಲೋಕವ ಬಿಡದೆ
ಆಳಬೇಕೆಂಬ ಆಲೋಚನೆ ಮನ -
ಏಳಲುವಾಗೆದಯ್ಯ ಪೇಳಿಕೊಂಬುವದೇನು
ಪಾಲಸಾಗರ ಶಾಯಿ ವಿಜಯವಿಟ್ಠಲರೇಯ
ಕಾಲಕಾಲಕೆ ಮನೋಧಾಳಿ ನಿಲ್ಲಿಸಲರಿದು ॥ 2 ॥
ತ್ರಿವಿಡಿತಾಳ
ಗುಟುಕು ತಟಕು ಎರಡು ಸ್ವರ್ಗ ಪಾತಾಳಕ್ಕೆ
ಕಠಿಣವಾಗಿದ್ದ ಬಂಧನವಾದ ಕಾಲಕ್ಕೆ
ಕುಟೀರದೊಳಗಿದ್ದು ಬಳಲೂವ ಕಾಲಕ್ಕೆ
ನೆಟ್ಟನೆ ದೇಹಕ್ಕೆ ರೋಗ ಪ್ರಾಪ್ತವಾದ ಕಾಲಕ್ಕೆ
ಪಠಿಸುತ್ತ ಮಹಶಾಸ್ತ್ರ ಓದಿದ ಕಾಲಕ್ಕೂ
ಜಠರ ಭೂಮಿಗೆ ತಾಕಿ ಚರಿಸುವ ಕಾಲಕ್ಕೂ
ತುಟಿ ನಡುಗಿ ಮೈಯೆಲ್ಲ ಶೋಷಿಸಿದ ಕಾಲಕ್ಕೂ
ಜಟೆ ಧರಿಸಿ ಯತಿ ಜೋಗಿ ಎನಿಸಿದ ಕಾಲಕ್ಕೂ
ತಟಿನಿ ಸ್ನಾನವ ಮಾಡಿ ಜಪ ಮಾಳ್ಪ ಕಾಲಕ್ಕೂ
ಜೊಟ ಜೊಟನೆ ಮೈಯಲ್ಲಿ ಕ್ರಿಮಿ ಸುರಿದ ಕಾಲಕ್ಕೂ
ಕಟ್ಟಳೆಯಿಂದಲಿ ಬಹುರೋಗ ಭೋಗವಿದ್ದ ಕಾಲಕ್ಕೂ
ಪುಟ್ಟೆ ಶ್ವಾಸ ಬಂದು ಕಂಠಗತವಾಗಿ
ಗುಟು ಗುಟು ಗುಟು ಎನುತಾ ತೆರಳುವ ಕಾಲಕ್ಕು
ಗುಟುಕು ತಟಕಿನ ಚಿಂತೆ ತೊಲಗದಯ್ಯಾ
ತಟಿ ವ್ಯಾಕುಲ ವೃತ್ತಿ ಪ್ರಸಕ್ತಿ ಸಂ -
ಪುಟದೊಳಗಿದ್ದಂತೆ ಕಾಣಿಸದು
ಕಟಕ ವಿಷಯದಲ್ಲಿ ಕವಚ ಮಾಡಿಸಿ ಅಂ -
ಗುಟ ಶಿರ ಪರಿಯಂತ ತೊಡಸಿದರು
ಧಿಟ ಮನಸಿಗೆ ಸಾಕು ಎಂಬೋದೆ ಸೊಲ್ಲು
ಸಟಿಯಾಗಿ ಒಮ್ಮಿಗಾದರು ಬಾರದು
ಹಟ ಇದೆ ಸರ್ವದ ಸ್ಥಿರವಾಗಿ ಇದೆ ಇಂಥ
ಲೊಟಿವಿಟಿ ಸಂಸಾರ ಹೇಯವೆನ್ನಿ
ನಿಟಿಲದಲ್ಲಿ ಒಂದು ಕಣ್ಣು ತಂದಿಟ್ಟರು
ಘಟಕವಾದರು ಮನಸು ಹಿಂದಾಗದೂ
ಕಟಕ ಕೇಯೂರ ಹಾರ ವಿಜಯ -
ವಿಟ್ಠಲ ನಿನ್ನಂಘ್ರಿಯ ನಂಬಿಹೆ ದಮ್ಮಯ್ಯ ॥ 3 ॥
ಅಟ್ಟತಾಳ
ಸಪ್ಪಡಿ ಮೆಲುವಾಗ ಉಪ್ಪಿನ ಯೋಚನೆ
ಉಪ್ಪು ದೊರೆತಾಗ ಸೊಪ್ಪಿನ ಯೋಚನೆ
ಸೊಪ್ಪು ದೊರಕಿದಾಗ ತುಪ್ಪದ ಯೋಚನೆ
ತುಪ್ಪ ದೊರಕಿದಾಗ ಕುಪ್ಪೆಯ ಯೋಚನೆ
ಕುಪ್ಪೆ ದೊರಕಿದಾಗ ಕೊಪ್ಪರಿಗೆ ಯೋಚನೆ
ಕೊಪ್ಪರಿಗೆ ಉಂಟಾಗೆ ಸಪ್ತದ್ವೀಪದ ಚಿಂತೆ
ಇಪ್ಪದು ಈ ಪರಿ ತಪ್ಪದೆ ಒಂದೊಂದು
ಅಪ್ಪಾರ ಯೋಚನೆ ಇಪ್ಪವು ಸಾವಿರ
ಇಪ್ಪತೊಂದು ಆರು ಒಪ್ಪದಿಂದಲಿ ಶ್ವಾಸ
ದರ್ಪಗುಂದುವ ತನಕ ಪೋಪದು ಯೋಚನೆ
ಸರ್ಪಶಾಯಿ ನಮ್ಮ ವಿಜಯವಿಟ್ಠಲರೇಯ
ಮುಪ್ಪಾದರೇನಯ್ಯ ತಪ್ಪದು ತಾವತ್ತನಕ ॥ 4 ॥
ಆದಿತಾಳ
ಸಾಧನವೆಂತಾಹದೊ ಇಂದ್ರಿಯ ಲೋಲುಪಗೆ
ಆದರದಲಿ ಅಪರಾಧ ಸಹಸ್ರ ಸಂ -
ಪಾದಿಸಿ ಪ್ರವರ್ತಕ ಮಾಡಿದೆ ಮರಿಯಾದೆ
ಮೇದಿನಿಯೊಳು ಪುಣ್ಯವೆಂಬದು ತಿಳಿಯೇ ಮಧು -
ಸೂದನ ನಿನ್ನ ಚರಣದಲ್ಲಿ ಭಕುತಿ ಎಂತೊ
ಸಾಧಿಸಿ ಕಾಡುತಿವೆ ವಿಷಯಂಗಳು ನಿತ್ಯ
ಬಾಧೆ ಬಡಿಸುತಿವೆ ಬಿನ್ನಹ ಮಾಡುವದೇನು
ಆದರಿಸಿ ನೀನೆ ಭಕುತಿ ಜ್ಞಾನ ಪ್ರ -
ಸಾದವೆ ಪಾಲಿಸಿ ಪ್ರೀತಿಯಿಂದಲಿ ನಿನ್ನ
ಪಾದವೆ ತೋರಿಸಯ್ಯ ಆನಂದವಾಗಲಿ
ಮೋದ ಮೂರುತಿ ನಮ್ಮ ವಿಜಯವಿಟ್ಠಲ ಎನ್ನಾ -
ರಾಧನೆ ಎಂಬೋದೇನು ನಿನ್ನ ನೇಮನ ಮುಖ್ಯ ॥ 5 ॥
ಜತೆ
ಸಕಲ ಪ್ರಾಕು ಪ್ರಾಕು ಪ್ರಾಕೂ ಪಾಪ ಪ್ರಾಯಶ್ಚಿತ್ತ
ರುಕುಮಿಣಿ ಪತಿ ವಿಜಯವಿಟ್ಠಲ ನಿನ್ನ ನಾಮ ॥
Comments
Post a Comment