SHRAVANA SHANIVARADA HADU

ಶ್ರಾವಣ ಶನಿವಾರದ ಹಾಡು

🌺🌺🌺🌺🌺🌺

ಗಜವದನನ ಪಾದಾಂಬುಜಗಳಿಗೆರಗುವೆನು
ಅಜನರಸಿಗೆ ನಮಸ್ಕರಿಸಿ
ತ್ರಿಜಗವಂದಿತ ಲಕ್ಷ್ಮೀನಾರಾಯಣ ಸ್ವಾಮಿ
ನಿಜಪತ್ನಿ ಕತೆಯ ವರ್ಣಿಸುವೆ

ಅರಸನಾಶ್ರಯವ ಮಾಡೊಂದು ಪಟ್ಟಣದಲ್ಲಿ
ಇರುತ್ತಿದ್ದ ಸೋಮೇಶಭಟ್ಟ
ಹರುಷದಿಂದಲಿ ಸೊಸೆಯರು ಗಂಡುಮಕ್ಕಳು
ಭರಿತವಾದರು ಸುಖದಿಂದ

ಆ ಮಹಾಕ್ಷೀರಸಾಗರದಲ್ಲಿ ಜನಿಸಿದ
ಶ್ರೀಮಹಾಲಕ್ಷ್ಮಿದೇವೇರ ನೇಮದಿಂದಿಟ್ಟು
ನಿಷ್ಠೆಯಲಿ ಸೋಮೇಜಮ್ಮ
ತಾ ಮಹಾ ಸಂಭ್ರಮದಿಂದ

ಸಾದು ಪರಿಮಳ ಅರಿಷಿಣ ಗಂಧ ಕುಂಕುಮ
ಕ್ಯಾದಿಗೆ ಕುಸುಮ ಮಲ್ಲಿಗೆಯ
ಮಾಧವನರಸಿ ಮಾಲಕ್ಷ್ಮಿಗರ್ಪಿಸಿ
ಮಂಗಳಾರತಿಯನ್ನು ಬೆಳಗುವೋರು

ಎಣ್ಣೋರಿಗೆ ತುಪ ಸಣ್ಣ ಶ್ಯಾವಿಗೆ ಪರಮಾನ್ನ
ಶಾಲ್ಯಾನ್ನ ಸೂಪಗಳು
ಚೆನ್ನವಾಗಿದ್ದ ತಾಂಬೂಲವನರ್ಪಿಸಿ
ಅದನ್ನುಂಡರು ಅತಿ ಹರುಷದಲಿ

ಸುಂದರ ಗೌರೀ ಶುಕ್ಕುರವಾರ ಪೂಜೆ
ಸಾನಂದದಿ ಶನಿವಾರದಲ್ಲಿ
ಕುಂದ ಮಂದಾರ ಮಲ್ಲಿಗೆ ಗಂಧ ಕುಂಕುಮ
ಚೆಂದುಳ್ಳಾರತಿಯನೆತ್ತಿದರು

ಹಿಟ್ಟಿನ ಕಡುಬು ಹಿಂಡಿಯ ಪಲ್ಯವನು ಮಾಡಿ
ಅಚ್ಚೆಳ್ಳು ಗಾಣದೆಣ್ಣೆಯನು
ನುಚ್ಚು ಮಜ್ಜಿಗೆ ಹುಳಿ ತುಳಿಯ ಕಟ್ಟಂಬಲಿ
ಇಟ್ಟರು ನೈವೇದ್ಯಗಳನು

ಭೋಜನಕೆನುತ ಕುಳ್ಳಿರುವೋ ಕಾಲದಿ ಬಂದು
ರಾಜನ ಸತಿಯು ನೋಡುತಲಿ
ಸೋಜಿಗವೇ ನಿಮ್ಮ ಗೌರಿಯ ಸಂಪತ್ತು
ಈ ಜಗದೊಳಗೆ ಕಾಣೆನೆನುತ

ಬೇಕೆದರೊಂದು ಬೇಡಲು ಅರಸನ ಸತಿ
ಸಾಕು ದರಿದ್ರದಂಬಲಿಯ
ಹಾಕಿದ ಹರಡಿ ಕಂಕಣದೊಳು ಸಿಕ್ಕೀತು
ನಾ ಕೈಯ್ಯ ಇಡಲಾರೆನೆನಲು

ತಟ್ಟನೆದ್ದು ಹಾಕಿಕೊಂಡಷ್ಟೂ ಪದಾರ್ಥವ
ತುಷ್ಟರಾಗಿ ಉಂಡರು ಆಗವರು
ಕಟ್ಟಿದ್ದ ತೂಗು ಮಣೆಯಲಿ ಕಾಲುಗಳು
ಇಳಿಬಿಟ್ಟು ಕುಳಿತಳು ರಾಜನರಸಿ

ಒಂದೊಂದು ಅಡಿಗೆ ನಿಂದ್ಯವು ಮಾಡಿ ನಗುತಿರೆ
ಕುಂದಿತು ಸಕಲ ಸಂಪತ್ತು
ಬಂದಿತು ಪರ ರಾಯರಿಂದ ಮುತ್ತಿಗೆ ದೊರೆ
ಬಂಧನ ಮಾಡಬೇಕೆನುತ

ದೊರೆ ತಾ ನೋಡುತಲಿರೆ ತ್ವರಿತದಿಂದಾತನ
ಅನುಸರಿಸಾಗ ನಡೆದರು
ದಿನತುಂಬಿದಂತೆ ಗರ್ಭಿಣಿಗೆ ಆಗ ಬಂದವು
ಕ್ಷಣಕೊಮ್ಮೆ ಟೊಂಕ ಬ್ಯಾನೆಗಳು

ಪುತ್ಥಳಿಗೊಂಬೆಯಂದದಿ ಜೋಡು ಮಕ್ಕಳು
ಕಿತ್ತಳೆವನದೊಳಗೆ ಜನಿಸಿ
ಹೊಚ್ಚಿದಳು ಬಾಳೆದೆಲೆಯ ಹಾಸುತಾ ಹೊಳೆ
ತಟ್ಟನೆ ದಾಟಿ ನಡೆದರು

ಬೇಕಾದ ಫಲಗಳು ಅನೇಕ ಪುಷ್ಪಂಗಳು
ಜೋಕೆ ಮಾಡುತ ವನದಲ್ಲಿ
ಕೋಕಿಲು ಗಿಳಿ ನವಿಲು ಹಿಂಡು ನೋಡುತಲಿ
ತಾವು ಹಾಕುತ್ತಿದ್ದರು ಕಾಲವನು

ನಸುಕಿನೊಳಗೆ ಬಂದ ಸೋಮೇಶಭಟ್ಟನು
ಹಸುಮಕ್ಕಳನ್ನೇ ನೋಡಿದನು
ಮುಸುಕು ಹಾಕಿ ತಂದು ಮುದ್ದಿಸುವೋ ಮಕ್ಕಳ ಸತಿ
ವಶ ಮಾಡಿ ಕೊಟ್ಟ ಕೈ ಒಳಗೆ

ಹುಟ್ಟಲಿಲ್ಲವೆ ಹೆಣ್ಣು ಮಕ್ಕಳೂ ನಮಗೀಗ
ಕೊಟ್ಟನು ದೇವರೆಂದೆನುತ
ಅರ್ಥಿಯಿಂದಾಗ ಮೂಬಟ್ಟು ಈರಲು ಮಾಡಿ
ತೊಟ್ಟಿಲೊಳಿಟ್ಟು ತೂಗಿದರು

ನಾಮಕರಣ ಮಾಡುತ ಹೆಸರಿಟ್ಟರು
ಸಾಯಕ್ಕ ದೇಹಕ್ಕನೆಂದೆನುತ
ಪ್ರಾಯಕ್ಕೆ ಬಂದ ಮಕ್ಕಳ ನೋಡಿ ಹುಡುಕಿದ
ಸೋಮರ್ಕರಂಥ ವರಗಳ

ಅರಸನ ಕರೆದು ಅಕ್ಕನ್ ಕೊಟ್ಟರಾಗಲೇ
ಕರೆಸಿ ಪ್ರಧಾನಿಯ ತಂಗಿಯನು
ಹರುಷದಿಂದಲಿ ಧಾರೆ ಎರೆದು ಹೆಣ್ಣು ಮಕ್ಕಳ
ಕಳಸಿಕೊಟ್ಟಳು ಸೋಮೇಜಮ್ಮ

ಅಕ್ಕರಿದಿಂದ ಹೇಳಿದಳು ಸೋಮೇಜಮ್ಮ
ಮಕ್ಕಳ ಕರೆದು ಬುದ್ದಿಯನು
ಶುಕ್ರವಾರದ ಗೌರೀ ಮರೆಯದೇ ಮಾಡೆ
ಶ್ರೀ ಲಕ್ಕುಮಿ ಒಲಿವೋಳೆಂದೆನುತ

ಸಾಯಕ್ಕ ಮಾಡೋ ಸಂತಾನ ಸಂಪತ್ತಿಗೆ
ಸಹಾಯವಾದಳು ಶ್ರೀ ಗೌರೀ
ದೇಹಕ್ಕ ಮರೆತು ದೇಹಕ್ಕೆ ಗ್ರಾಸವಿಲ್ಲದೆ
ರಾಯನ ಸೆರೆಯ ಹಾಕಿದರು

ಪೊಡವಿಪಾಲಕನ ಬಂದು ಹಿಡಿದುಕೊಂಡೊಯ್ಯಲು
ಉಡುಗೆ ತೊಡಿಗೆ ವಸ್ತ್ರಾಭರಣ
ಉಡುಗಿತು ಸಕಲ ಸಂಪತ್ತು ದೇಹಕ್ಕಗೆ
ಧೃಢವಾಯಿತಾಗ ದಾರಿದ್ರ್ಯ

ಮಾತನಾಡಿದರು ಮಕ್ಕಳು ತಾಯಿ ಒಡಗೂಡಿ
ಈ ತೆರನಾಯಿತೀ ಬದುಕು
ಮಾತಾಪಿತರು ಒಡಹುಟ್ಟಿದವರು ನಿನ್ನ
ಮಾತಾನಾಡಿಸೋರು ಯಾರಿಲ್ಲೆ

ದೂರದಲ್ಲಿರೋರೆನ್ನ ತಾಯಿ ತಂದ್ಯೇರು
ಸಾರ್ಯದಲ್ಲಿರಲೊಬ್ಬ ತಂಗಿ
ಸೂರೆಹೋಯಿತು ದೊರೆತನ ಭಾಗ್ಯ ಬಡವ
ಪ್ರಧಾನಿ ಹ್ಯಾಗಿರುವೊನೋ ನಾನರಿಯೆ

ಕಂಡುಬರುವೆನೆಂದು ಚಿಂದಿ ಮೈಗೆ ಸುತ್ತಿ
ತುಂಡು ಕೋರಿಯನ್ನುಟ್ಟುಕೊಂಡು
ಮಂಡಿಗೆ ಹಚ್ಚಿ ತಳ ಪ್ರಣತಿಯೆಣ್ಣೆಯ
ಹೊಳೆದಂಡೆಗೆ ಬಂದು ತಾ ಕುಳಿತ

ಪೋರ ನೀನಾರೆಂದು ವಿಚಾರವ ಮಾಡಲು
ನೀರಿಗೆ ಬಂದ ನಾರಿಯರು
ದೂರದಿ ಬಂದೆ ದೇಹಕ್ಕನ ಹಿರಿಯ
ಕುಮಾರನೆಂದು ಹೇಳಿ ಕಳಿಸಿದನು

ಬಂದು ಹೇಳಿದರು ಅವನಂದ ಚೆಂದವ
ಕರೆತಂದರು ಹಿತ್ತಿಲ ಬಾಗಿಲಿಂದ
ಬಂದು ಹೇಳಿಕೊಂಡಾ ದರಿದ್ರ ಕಷ್ಟವನೆಲ್ಲ
ಉಂಡುಟ್ಟು ಸುಖದಿ ತಾನಿದ್ದ

ಆಲಯಕ್ಕೆ ಹೋಗಿ ಬರುವೆನೆಂದು ಅಪ್ಪಣೆ ಕೇಳಿ
ಕಾಲಹರಣ ಮಾಡದಂತೆ
ಕೋಲಿನೊಳಗೆ ಹಣ ತುಂಬಿ ಕೈಯಲ್ಲಿ ಕೊಟ್ಟು
ಆಲಸ್ಯವಿಲ್ಲದೆ ಕಳುಹಿದಳು

ಬಾಲಕ ನಿನಗಿಂಥ ಕೋಲ್ಯಾಕೆಂದೆನುತ
ಗೋಪಾಲಕ ಸೆಳೆದುಕೊಂಡೊಯ್ದ
ನೂಲದವರಿಗೆ ನೂತವರ ವಸ್ತ್ರವ್ಯಾಕೆ
ಆಲೋಚಿಸುತ ತಾ ಬಂದ

ಮಿಡುಕುತ ಬಂದು ಮಾತೆಗೆ ಎರಗಿದ
ಅವರ ಒಡನೆ ನಡೆದ ವಾರ್ತೆ ಹೇಳುತಲಿ
ಕೊಡುವಷ್ಟು ಕೊಟ್ಟರೆ ಎನಗೆ ದಕ್ಕದೆನುತಲಿ
ನಡೆದ ಮತ್ತೊಬ್ಬ ತನಯನು

ತಳಪ್ರಣತಿ ಎಣ್ಣೆ ತಲೆಗೆ ಪೂಸಿಕೊಂಡು
ಮೊಳಕೋರಿಯನು ಉಟ್ಟುಕೊಂಡು
ಬಳುಕುತ ಬಂದು ಭಾವಿಯ ಮೇಲೆ
ಕುಳಿತು ಹೇಳಿ ಕಳಿಸಿದ ಮಾತೆ ಮಂದಿರಕೆ

ಗೊತ್ತಿಲೆ ಕರೆತಂದರು ಹಿತ್ತಿಲ ಬಾಗಿಲಿಂದಷ್ಟು
ವಾರ್ತೆಗಳ ಕೇಳುತಲಿ
ಅತ್ಯಂತ ಅಂತಃಕರಣದಿಂದಲಿ ಭಕ್ಷ್ಯ ಪಾಯಸ
ಮೃಷ್ಟಾನ್ನವ ಉಣಿಸಿದರು

ನಿತ್ಯ ಉಪವಾಸ ಮಾಡುವುದೆನ್ನ ಮನೆಯಲ್ಲಿ
ಅಪ್ಪಣೆ ನೀಡೆಂದೆನಲು
ಬುತ್ತಿಯೊಳಗೆ ಹಣ ಕಟ್ಟಿ ಕಳುಹೆ ಕಾಗೆ
ಎತ್ತಿಕೊಂಡು ಹೋಯಿತು ಆ ಕ್ಷಣದಿ

ಏನು ಹೇಳಲಿ ನಾನು ಹೋದ ಕಾರ್ಯಗಳಿಂಥ
ಹೀನವಾಯಿತು ಹೀಗೆಂದೆನುತ
ನಾನು ಹೋಗಿ ಬರುವೆನೆಂದೆನುತ ಮತ್ತೊಬ್ಬ
ಕುಮಾರನು ತೆರಳಿ ನಡೆದನು

ಹರುಕು ಕೋರಿಯನುಟ್ಟು ಮುರುಕು ತಂಬಿಗೆ ಹಿಡಿದು
ಕೆರಕು ಬುತ್ತಿಯ ಕಟ್ಟಿಕೊಂಡು
ಗುರುತು ಹೇಳಿ ಕಳುಹೆ ಹಿತ್ತಿಲ ಬಾಗಿಲಿಂದಲಿ
ಕರೆತಂದರೀಗ ಅರಮನೆಗೆ

ಎರಡು ದಿನವಲ್ಲಿ ಇಟ್ಟುಕೊಂಡು ಉಪಚರಿಸುತ
ಬುರುಡೆಯೊಳಗೆ ಹಣವನ್ನು ಕಡುಬ್ಯಾಗ
ತುಂಬಿ ಕೈಯಲ್ಲಿ ಕೊಟ್ಟು ಕಳಿಸಲು
ನಡೆದ ಆತನು ಅಡವಿ ಮಾರ್ಗದಲಿ

ಸೆಳೆದು ನಾಲಿಗೆ ಬಿಸಿಲೇರಿ ಭಾವಿಯ ಕಂಡು
ಇಳಿದು ಪಾವಂಟಿಗೆಯಲ್ಲಿಟ್ಟು
ಉರುಳಿಕೊಂಡು ಹೋಗಿ ಮಡುವ ಸೇರಲು ಅದ ಕಂಡು
ಬಳಲುತ ಬಂದ ಮಂದಿರಕೆ

ಗತಿ ಹೀನರೊಳಗೆ ನಮ್ಮಂಥ ನಿರ್ಭಾಗ್ಯರ
ಪೃಥ್ವೀಯೊಳಗೆ ಕಾಣೆನೆನುತ
ಅತಿಬಾಯ ಬಿಡುವೊ ಮಾತೆಯ ಕಂಡು
ಮತ್ತೊಬ್ಬ ಸುತನಾಗ ತೆರಳಿ ನಡೆದನು

ಸೊಕ್ಕಿದ ಮೈಗೆ ಛಿದ್ದರ ಬಟ್ಟೆಯನು ಸುತ್ತಿ
ಕುಕ್ಕುತ ಹೇನು ಕೂರೆಗಳ
ಚಿಕ್ಕಮ್ಮಗೆ ಹೇಳಿ ಕಳುಹೆ ಕರೆತಂದರು
ಆಗ ಹಿತ್ತಲ ಬಾಗಿಲಿನಿಂದ

ಏಳೆಂಟು ದಿನವಲ್ಲಿ ಬಹಳ ಉಪಚರಿಸುತ
ಬಾಳುವ ಕ್ರಮವ ಕೇಳಿದಳು
ಜಾಳಿಗೆ ಹೊನ್ನು ಚಮ್ಮಾಳಿಗೆಯಲಿ ತುಂಬಿ
ಕಾಲ ಮೆಟ್ಟಿಸಿ ಕಳುಹಿದಳು

ಅದು ಮೆಟ್ಟಿ ಬರುತಿರೆ ಒದಗಿ ಬಂದಾ ಶನಿ
ಹುದಲು ಕಾಣದೆ ಸಿಗಿಬಿದ್ದು
ಎದೆಬಾಯ ಬಿಡುತ ಎತ್ತ ಹುಡುಕಿದರಿಲ್ಲವೆಂದು
ಎದುರಿಗೆ ಬಂದು ನಾ ನಿಂತ

ನಾಲ್ಕು ಮಂದಿಯ ಸುದ್ಧಿ ನಾನಾ ಪರಿಯ ಕೇಳಿ
ವ್ಯಾಕುಲವಾಯಿತೀ ಮನಕೆ
ನಾ ಕಂಡು ಬರುವೆನೆಂದೆನುತ ದೇಹಕ್ಕನು
ಆ ಕಾಲದಲಿ ತೆರಳಿದಳು

ಉಟ್ಟಳು ಮೂರು ಸೀರೆಯನು ತೋಳಿನಲಿ
ತೊಟ್ಟಳು ಚಿಂದಿ ಕುಪ್ಪಸವ
ಕಟ್ಟಿದ್ದ ಜಡೆಗೆಣ್ಣೆ ಹಚ್ಚಿ ತಳುಪನು ಹಾಕಿ
ಬಟ್ಟು ಕುಂಕುಮವ ತೀಡಿದಳು

ಒಂದೊಂದು ಕರಿಯ ಕಾಜಿನ ಬಳೆ ಕೈಯಲ್ಲಿ
ಕಂದಿಕುಂದಿದ ಕೂಸನೆತ್ತಿ
ಬಂದಳು ನಿಮ್ಮ ದೇಹಕ್ಕನೆಂದೆನುತಲಿ
ತಂಗಿಗೆ ವಾರ್ತೆಯ ತಿಳಿಸಿದಳು

ಅಕ್ಕನ ಕರೆತಂದಿರಾ ಹಿತ್ತಿಲಿಂದಲಿ
ಶುಕ್ಕುರವಾರ ಶುಭದಿನದಿ
ಮಕ್ಕಳು ಸೊಸೆಯರಿಂದ ಒಡಗೂಡಿ ಬಂದು
ದೇಹಕ್ಕನ ಚರಣಕ್ಕೆರಗಿದರು

ಅಂದಗಲಿದ ಅಕ್ಕತಂಗಿಯರಿಬ್ಬರು
ಇಂದಿಗೆ ಕಲೆತೆವೆಂದೆನುತ ಮಿಂದು
ಮಡಿಯನುಟ್ಟು ಬಂದೆಲ್ಲ ಪರಿವಾರ
ಹಾಗೆಂದು ಭೋಜನಕೆ ಕುಳಿತರು

ಹೋಳಿಗೆ ಹೊಸಬೆಣ್ಣೆ ಕಾಸಿದ ತುಪ್ಪವು
ಕ್ಷೀರ ಶ್ಯಾವಿಗೆಯು ಮೃಷ್ಟಾನ್ನ
ಬ್ಯಾಗದಿಂದುಂಡು ಹಾಕುತಲಿ ತಾಂಬೂಲವ
ತೂಗುಮಂಚದಿ ಮಲಗಿದರು

ಬೆಳಗಾಗಲೆದ್ದು ಹೇಳಿದಳಾಗ ಸೊಸೆಯರ
ಕರೆದು ಸಾಯಕ್ಕ ಕೆಲಸವ
ಬಿಳಿಜೋಳ ಕುಟ್ಟಿ ಬೀಸಿರೆ ನೀವು ಇಂದಿನ
ಅಡಿಗೆಯ ಕ್ರಮವ ಹೇಳಿದರು

ಹುಳಿನುಚ್ಚು ಮಾಡುವೆ ತುಳಿಯಕಟ್ಟಂಬಲಿ
ಎಳೆಸೊಪ್ಪಿನ ಹಿಂಡಿ ಪಲ್ಯವನು
ತಿಳಿಯಾದ ಎಳ್ಳೆಣ್ಣೆ ತರಿಸಬೇಕು
ಹಿಟ್ಟಿನ ಕಡುಬು ಮಾಡಬೇಕೆನುತ

ಅದು ಕೇಳಿ ದೇಹಕ್ಕ ಹೃದಯ ತಲ್ಲಣಿಸುತ
ಎದೆ ಒಳಗೆ ಅಲಗು ನೆಟ್ಟಂತೆ
ನದಿ ಒಳಗೆ ಅಲ್ಪ ಹಳ್ಳವು ಬಂದು ಸೇರಲು
ಅದು ಲಕ್ಷಿಯಾಗಿ ತೋರುವುದೇ

ಉರಿಯ ಒಳಗೆ ಎಣ್ಣೆ ಸುರುವಿದಂತಾಯಿತು
ಸಿರಿಯು ಸಂಪತ್ತಿಲಿಂದೀಕೆಯ
ಗರಗಸದಿಂದಲಿ ಕೊರೆದು ಉಪ್ಪು ಸಾಸಿವೆ
ಅರೆದು ಹಚ್ಚಿದಂಥ ಮಾತುಗಳು

ಜನರ ಮನೆಯಲ್ಲಿ ಅಪಹಾಸ್ಯವಾಗೊದಕ್ಕಿಂತ
ವನವಾಸಗಳು ಲೇಸು ಎಂದೆನುತ
ಮನದ ಸಂತಾಪ ಸೈರಿಸಲಾರದೆದ್ದಳು
ದನವನೆ ಕಟ್ಟೋ ಮಂದಿರಕೆ

ಎತ್ತಿನ ಗೋದಲಿ ಒಳಗೆ ಕಂದಲಿದಂಟು
ಸೊಪ್ಪುಗಳನು ಹೊದ್ದುಕೊಂಡು
ಕಚ್ಚುತಲಿರಲು ಚುಕ್ಕಾಡಿ ಕ್ರಿಮಿಗಳೆಲ್ಲ
ಅತ್ತಿತ್ತಾಗದೆ ಮಲಗಿದಳು

ಮಧ್ಯಾಹ್ನವಾಯಿತು ಅಡಿಗೆಯು ದೇಹಕ್ಕನ
ಸದ್ದು ಸುಳಿವು ಕಾಣೆನೆನುತ
ನಿದ್ರೆಯಿಂದಲ್ಲಿ ಮಲಗಿದಳೋ ಆಕೆಯ ಇನ್ನು
ಇದ್ದಲ್ಲಿಂದಲಿ ಕರೆತನ್ನಿ

ಬಲ್ಲಷ್ಟು ಮನೆ ಹುಡುಕಿದೆವು ಅತ್ತೆ ಬಾಯರ
ಸೊಲ್ಲನು ಕಾಣೆವೆಂದೆನುತ
ಎಲ್ಲಿ ಹುಡುಕಿದರಿಲ್ಲವೆನುತ ಮತ್ತೀಗ
ಬಂದೆಲ್ಲ ಸೊಸೆಯರು ಹೇಳಿದರು

ಒಳಗೆಲ್ಲ ಹುಡುಕಿ ಬಂದರು ಸಂದುಗೊಂದು
ಆಕಳ ಕಟ್ಟುವಂಥ ಕೋಣೆಯಲಿ
ಸೆಳೆದು ದಂಟುಗಳ ಹಾಕುತಿರಲು ಗ್ವಾದಲಿಯಲ್ಲಿ
ಸುಳಿವನೆ ಕಂಡು ನೋಡುವರು

ಸಿಕ್ಕರು ನಮ್ಮ ಅತ್ತೆಯರೆಂದೆಬ್ಬಿಸುತಲಿ
ಹಸ್ತವ ಹಿಡಿದು ಕರೆತಂದರು
ಉಕ್ಕುವ ಉರಿ ಮೋರೆಯನು ನೋಡಿ ಮನದ
ಸಿಟ್ಟೇನು ಹೇಳೆಂದು ಕೇಳಿದಳು

ಹೇಳುವುದೇನು ಕೇಳುವುದೇನು ನಿನಗಿಂತ
ವ್ಯಾಳ್ಯಾವಾದೆನು ನಾನೆಂದೆನುತ
ಜೋಳದನ್ನವ ಕಾಣದಂತೆ ನಾ ಬಂದೆನೇನು
ನಾಳೆ ಪೋಗುವೆ ನನ್ನ ಮನೆಗೆ

ಕೆಟ್ಟ ಬಡವರು ಬರುವುದುಂಟೆ ಜಗದೊಳು
ಅಟ್ಟುಂಬ ಮನೆಯ ಬಾಗಿಲಿಗೆ
ಕಷ್ಟದಿ ಕಾಲ ಕಳೆಯಲಾಗದಿದ್ದರೆ
ಅಟ್ಟಡವಿಯ ಸೇರಬಹುದು

ಬಗೆಬಗೆ ಅಡಿಗೆ ಹೇಳಿದೆ ಸೊಸೆಯರಿಗೆಲ್ಲ
ನಗೆಹಾಸ್ಯವಾಗಿ ತೋರುವುದೆ
ಖಗರಾಜನಲಿ ನೊಣವು ಬಂದು ಸರಿ
ಬೀಗತನವ ಮಾಡೇನೆಂಬೋದು ಉಚಿತವೆ

ಭಕ್ಷ್ಯ ಪಾಯಸ ಮಾಡಿ ನಿನ್ನಿನ ದಿನ
ದುರ್ಭಿಕ್ಷದ ಅಡಿಗೆ ಇಂದಿನಲ್ಲಿ
ಭಿಕ್ಷಕ್ಕೆ ಬಂದೆನೆ ನಿನ್ನ ಮನೆಗೆ ಎಂದು
ಅಕ್ಷದಿ ಜಲವ ತುಂಬಿದಳು

ಅಕ್ಕಸದ ವಚನ ಕೇಳುತವೆ ಆಲೋಚಿಸಿ
ನಕ್ಕಳು ತನ್ನ ಮನದಲ್ಲಿ
ಶುಕ್ರವಾರದ ಗೌರಿ ಮಾಡದೆ ಈ ಕಷ್ಟ
ದುಃಖಕ್ಕೆ ಗುರಿಯಾದಿರೆನಲು

ಬರುವ ಕಾಲಗಳಲ್ಲಿ ಕರೆದು ನಮ್ಮಮ್ಮನು
ಅರುಹಲಿಲ್ಲವೆ ಗೌರಿಯನು
ಸಿರಿಯು ಸಂಪತ್ತು ಕೊಡುವ ಶನಿವಾರವ
ಮರೆತು ಬಿಟ್ಟ್ಯೇನೆ ಅಕ್ಕಯ್ಯ

ಲಕ್ಷ್ಮೀದೇವೇರ ಅಲಕ್ಷ್ಯ ಮಾಡಿದರಿಂಥ
ನಿಕ್ಷೇಪ ನಿಧಿ ತೊಲಗಿದಳು
ಈ ಕ್ಷಣ ನಿನ್ನ ಮನೆಯಲಿ ಪೂಜಿಸುವೆನೆ
ಸಾಕ್ಷಾತ ಶ್ರೀ ಗೌರಿಯನು

ಎರೆದು ಪೀತಾಂಬರ ಉಡಿಸಿ ತಂದಿಟ್ಟರು
ಪರಿ ಪರಿ ವಸ್ತ್ರಾಭರಣ
ವರ ಮಣಿಮಯವಾದ ಮಂಟಪದಲಿ ಚಟ್ಟಿಗೆ
ಬರೆದಿಟ್ಟರಾಗ ಪೀಠದಲಿ

ಹಾಕಿದರು ಐದು ಫಲಗಳು ಅಕ್ಕಿ ಅದರೊಳು
ನಾಲ್ಕೆಂಟು ನಂದಾದೀವಿಗೆಯು
ಶ್ರೀ ಕಮಲೆಯ ಮಧ್ಯದಲಿ ಸ್ಥಾಪನೆ ಮಾಡಿ
ಅನೇಕ ಭಕ್ತಿಯಿಂದ ಕುಳಿತಳು

ಮುಂದೆ ಕಟ್ಟಿದರು ಮಕರ ತೋರಣಗಳ
ದುಂದುಭಿ ಭೇರಿ ಬಡಿದವು
ಬಂದು ಮುತ್ತೈದೇರ ಸಹಿತ ಬ್ರಾಹ್ಮಣರೆಲ್ಲ
ಅಂದರು ವೇದೋಕ್ತ ಮಂತ್ರಗಳ

ಅರಿಷಿಣ ಪಿಡಿದು ಹಚ್ಚುತಲೆ ಹಿಂದಕೆ
ಗೌರಿ ಸರಕಾನೆ ತಿರುಗೆ
ಮೋರೆಯನು ಎಡಕೆ ಹೋಗಿ ಎರಡು ಕೈಮುಗಿದು
ಹೇಳಿಕೊಂಡರೆ ಬಲಕೆ ಬಂದಳು ಭಾಗ್ಯಲಕ್ಷ್ಮೀ

ಮಕ್ಕಳು ಮಾಡೋ ಮಹಾತಪ್ಪು ಅಪರಾಧ
ಹೆತ್ತ ಮಾತೆಯರೆಣಿಸುವರೆ
ಸತ್ಯವಂತಳು ಈಕೆ ಸಮರಿಲ್ಲವೆನುತಲಿ
ಭಕ್ತಿಂದ ಕರವ ಮುಗಿದಳು

ಸಾಯಕ್ಕನ ವಚನವ ಕೇಳುತಲೆ ಶ್ರೀಗೌರಿಯು
ದೇಹಕ್ಕಗೆದುರಾಗಿ ಕುಳಿತು
ಕಾಯಾ ವಾಚಾ ಭಕ್ತಿಗೊಲಿದು ತಾ
ಕಮಲದಳಾಯತಾಕ್ಷದಲಿ ನೋಡಿದಳು

ಕುಂಕುಮ ಗಂಧ ಬುಕ್ಕಿಟ್ಟು ಮಲ್ಲಿಗೆ ದಂಡೆ
ಪಂಕಜ ಪಾರಿಜಾತಗಳು
ಶಂಕರ ಸುರ ಬ್ರಹ್ಮರೊಡೆಯನ ಸತಿಗೆ
ಅಲಂಕಾರ ಪೂಜೆ ಮಾಡಿದರು

ಕಡಲಾಬ್ಜ ಶಯನನ ಮಡದಿ ಮಾಲಕ್ಷ್ಮಿಗೆ
ಒಡೆದು ತೆಂಗಿನಕಾಯಿ ಫಲವು
ಮಡದೇರಲ್ಲೆರು ಅರಿಷಿಣ ಕುಂಕುಮ
ಕೊಡುತ ಪುಷ್ಪಗಳ ಉಡಿ ತುಂಬಿ

ಅಚ್ಚಮುತ್ತಿನ ಹರಿವಾಣದೊಳು ನೈವೇದ್ಯ
ಭಕ್ಷ್ಯಪಾಯಸ ಬಡಿಸಿರಲು
ತುಷ್ಟಳಾಗಿ ಅದನೆ ನೋಡುತಲಿ ದೇಹಕ್ಕಗೆ
ಅಷ್ಟ ಸೌಭಾಗ್ಯ ನೀಡಿದಳು

ಬಟ್ಟು ಮುತ್ತಿನ ಹರಿವಾಣದೊಳು ನೈವೇದ್ಯ
ಮೃಷ್ಟಾನ್ನವ ಬಡಿಸಿರಲು
ಅರ್ಥಿಯಿಂದದನೆ ನೋಡುತಲಿ ದೇಹಕ್ಕಗೆ
ಮುತ್ತೈದೆತನವ ನೀಡಿದಳು

ದುಂಡುಮುತ್ತಿನ ಹರಿವಾಣದೊಳು ನೈವೇದ್ಯ
ಮಂಡಿಗೆ ತುಪ್ಪ ಸಕ್ಕರೆಯ
ಕಂಡು ಸಂತೋಷದಿಂದಾಗ ದೇಹಕ್ಕನ
ಗಂಡಗೆ ರಾಜ್ಯ ನೀಡಿದಳು

ಹೊಳೆವೊ ಚಿನ್ನದ ಹರಿವಾಣದೊಳು ಹಿಟ್ಟಿನ
ಕಡುಬು ಕಟ್ಟಂಬಲಿ ಬಡಿಸಿ
ತಿಳಿಯಾದ ಎಳ್ಳೆಣ್ಣೆ ಹಿಂಡಿಯ ಪಲ್ಯ ತಾಂಬೂಲ
ನಲಿನಲಿದಾಡಿ ನೋಡುತಲಿ

ಶಿರವನಲ್ಲಾಡಿಸಿ ಸಿರಿಮುಡಿ ಮ್ಯಾಲಿನ
ಸರ ಪಾರಿಜಾತ ಪುಷ್ಪಗಳು
ಅರಳು ಮಲ್ಲಿಗೆಯು ಅನಂತ ಹಸ್ತಗಳಿಂದ
ವರವ ಕೊಟ್ಟಳು ವರಲಕ್ಷ್ಮೀ

ಅಕ್ಕ ತಂಗಿಯರಾಗ ಜತ್ತಿಲಾರತಿ ಮಾಡೆ
ಮುತ್ತೈದೇರು ಪಾಡುತಲಿ
ಉತ್ತಮಾಂಗನೆಗೆ ಮಂತ್ರಾಕ್ಷತೆಯನು ಹಾಕಿ
ಎತ್ತಿದಾರತಿ ಇಳಿಸಿದರು

ಉಂಡರು ಸಕಲ ಜನರು ಸಹಿತಾಗಿ
ತಕ್ಕೊಂಡು ಕರ್ಪೂರದ ವೀಳ್ಯವನು
ಸಂಭ್ರಮದಿಂದ ಕೂತಿರಲು ದೇಹಕ್ಕಗೆ
ಬಂದೆರಗಿದರು ಬಾಲಕರು

ಅರಸು ತಾನಾಗಿ ಬಂದನು ನಮ್ಮಯ್ಯನು
ಕರಸಿದ ನಿಮ್ಮನೆಂದೆನುತ
ಹರುಷದಿಂದವರ ಮಾತುಗಳ ಕೇಳಿ
ಆನಂದಭರಿತವಾದರು ಸುಖದಿಂದ

ಘಡಘಡನಾಗ ಬಂದವು ತೇಜಿ ರಥಗಳು
ಬಡಿದವು ಭೇರಿ ನಾದಗಳು
ಸಡಗರದಿಂದ ಉಡುಗೊರೆ ವೀಳ್ಯ ತಕ್ಕೊಂಡು
ನಡೆದರು ತಮ್ಮ ಪಟ್ಟಣಕೆ

ಅಕ್ಕ ತಂಗಿಯರು ಅಂದಣವೇರಿ ಗೌರಿಯ
ಪಲ್ಲಕ್ಕಿ ಒಳಗೆ ಇಟ್ಟುಕೊಂಡು
ಭಕ್ತಿಯಿಂದ ಚಾಮರವ ಬೀಸುತಲಿ
ಸಮಸ್ತ ಜನರು ನಡೆತರಲು

ಆಕಳಪಾಲ ತಂದಾಗ ಕೈಯಲಿ ಕೊಟ್ಟ
ಈ ಕೋಲು ನಿಮ್ಮದೆಂದೆನುತ
ಹಾಕಿತು ಕಾಗೆ ಹಣದ ಬುತ್ತಿಗಂಟನು
ಸ್ವೀಕರಿಸಿದನೊಬ್ಬ ಸುತನು

ಮಡುವಿನೊಳಗೆ ಮುಣುಗೇಳುತಿರಲು ಕಂಡು
ಬುರುಡೆ ಹಣವ ಕೈಕೊಂಡು
ನಡೆವೊ ಮಾರ್ಗದಿ ಹುದಲೊಳಗೆ ಕಂಡು ಹಾರಿ
ಹಿಡಿದುಕೊಂಡು ಹಿಗ್ಗಿ ನಡೆದರು

ಭರದಿಂದ ಬಂದ ದೊಡ್ಡ ಮಳೆ ಸುರಿಯಲು
ಸಿರಿ ತೊಯ್ಯಲಾಗದೆಂದೆನುತು
ಹರದೇರಿಬ್ಬರೂ ಸೆರಗನೆ ಮರೆಮಾಡುತ
ಕರೆತಂದರಾ ತೋಟದಲಿ

ಒಂದು ಗಳಿಗೆ ಸ್ಥಳವನು ಮಾಡಿಕೊಟ್ಟರೆ
ಬಂದಿತು ಭಾಳ ಪುಣ್ಯಗಳು
ಅಂದ ಮಾತಿಗೆ ಕೋಪದಿಂದ ತಾ ನುಡಿದನು
ಇದೆಲ್ಲಿ ಸ್ಥಳವು ಹೋಗೆಂದು

ಮೋಹದಿ ಕರೆದು ಮನ್ನಿಸಿ ಮಹಲಕ್ಷುಮಿ
ದೇವಿಗೆ ಸ್ಥಳವನೆ ಕೊಟ್ಟು ನೀವು
ಮತ್ತೀಗ ಕೋಪಿಸಲಾಗದೀ ಗೌರೀ
ದ್ರೋಹಕ್ಕೆ ಒಳಗಾದೆ ನಾನು

ಎತ್ತಲ ಗೌರೀ ಎಲ್ಲಿಯ ದ್ರೋಹ ನಿನಗೆಂದು
ಪತ್ನಿಯ ಕರೆದು ಕೇಳಿದನು
ಸತ್ಯವಂತಳು ಈಕೆ ಸಮರಿಲ್ಲವೆನುತಲಿ
ಭಕ್ತಿಂದ ಕರ ಮುಗಿದಳು

ಹಿಂದಕ್ಕೆ ನಾ ಸೋಮೇಜಮ್ಮನ ಮನೆಯಲಿ
ನಿಂದ್ಯ ಮಾಡಿದೆ ಗೌರಿಯನು
ಬಂದಿತು ನಮಗೆ ವನವಾಸವೆಂದೆನುತಲಿ
ಗಂಡಗೆ ತಿಳಿಯಹೇಳಿದಳು

ಹೊಳೆವೋ ಪುತ್ಥಳಿಯಂಥ ಮಕ್ಕಳ ನಾನು
ಎಳೆ ಎಲೆ ಹಾಸಿ ಹೊಚ್ಚಿಟ್ಟೆ
ಹೊಳೆಯ ದಾಟಿದೆ ಅಳಿದರೊ ಉಳಿದಿದ್ದರೊ
ತಿಳಿಯಲಿಲ್ಲೆಂದು ಹೇಳಿದಳು

ಅಂದ ಮಾತನು ಕೇಳಿ ಸಂಭ್ರಮದಿಂದ
ತಂದೆ ತಾಯಿಗಳು ನೀವೆಂದೆನುತ
ಬಂದೆರಗಿದ ಮಕ್ಕಳ ನೋಡಿ
ಪರಮಾನಂದಭರಿತರಾದರು

ಜಾತವಾದಿರಿ ಪಾರಿಜಾತ ವನದೊಳು
ಅನಾಥರ ಮಾಡಿ ನಾ ಬಂದೆ
ಪ್ರೀತಿಲಿ ನಿಮ್ಮ ಸಲುಹಿದವರು ಯಾರೆಂದು
ಆ ತಾಯಿ ಸುತರ ಕೇಳಿದಳು

ತುಳಸಿಗೆ ಬಂದ ಸೋಮೇಜಭಟ್ಟನು ನೋಡಿ
ಗಳಿಸಿಕೊಂಡೊಯ್ದು ನಮ್ಮನ್ನು
ಬೆಳೆಸಿ ಧಾರೆಯನೆರೆದರು ಅರಸು ಪ್ರಧಾನಿಗೆ
ಕಳಿಸಿಕೊಟ್ಟಳು ಸೋಮೇಜಮ್ಮ

ಹೆಚ್ಚಿನ ತಾಯಿ ಸೋಮೇಜಮ್ಮ ಹೇಳಿದಳು
ಶುಕ್ಕುರುವಾರದ ಗೌರಿಯನು
ಮಕ್ಕಳು ಮನೆಯ ಸಂಪತ್ತೆಲ್ಲ
ಸೋಮೇಜಭಟ್ಟನ ಪುಣ್ಯವೆಂದೆನುತ

ಹಿಂದಾಗಲು ವನವಾಸ ಮುಂದ್ಯಾತಕೆನುತಲಿ
ತಂದು ವಸ್ತ್ರಗಳ ಉಡುಕೊಟ್ಟು
ಮುಂಗೈ ಹಿಡಿದು ಮುಪ್ಪಿನ ತಾಯಿ
ತಂದೇರ ಅಂದಣವನೆ ಏರಿಸಿದರು

ಭೋರೆಂಬೋ ನದಿಯ ದಾಟುತಲಿ ಕಟ್ಟಿಸಿದರು
ಊರ ಬಾಗಿಲಿಗೆ ತೋರಣವ
ಭೇರಿ ತುತ್ತೂರಿ ಬಾಜಾರ ಶೃಂಗರಿಸಿ
ಸಾಲು ದೀವಟಿಗೆ ಸಂಭ್ರಮದಿ

ಹಾಸುತಿದ್ದರು ನಡೆಮುಡಿ ಕದಲಾರತಿ
ಬೀಸುತ ಬಿಳಿಯ ಚಾಮರವ
ಸೋಸಿಲಿಂದಲಿ ಕರೆತಂದರು ಅರಮನೆಯ
ಸಿಂಹಾಸನದಲಿ ಕುಳ್ಳಿರಿಸಿ

ವರಸಿಂಹಾಸನದಲಿ ಒಪ್ಪಿರುವ ಮಾಲಕ್ಷ್ಮಿಗೆ
ಅರಳು ಹೂವು ಪುಷ್ಪಗಳು
ಪರಿ ಪರಿಯಲಿ ಸರ್ವ ಅಂಗಪೂಜೆಯ ಮಾಡಿ
ಫಲಗಳ ಅರ್ಪಿಸಿ ಕೈಯ ಮುಗಿದು

ನಿಂತು ನೋಡಿ ಹರಸು ನಿಶ್ಚಿಂತರ ಮಾಡೆಂದು
ಮಂತ್ರಾಕ್ಷತೆಯ ಹಾಕುತಲಿ
ನಿರಂತರ ತಮ್ಮ ಮನೆಯಲಿಟ್ಟು ಪೂಜಿಸಿ
ಸಂತೋಷದಿಂದ ಇದ್ದರವರು

ತಮ್ಮ ಸಾಕಿದ ತಾಯಿ ತಂದೇರ ಕರೆಸುತ
ನಿಮ್ಮದೀ ಸಕಲ ಸಂಪತ್ತು
ನಮ್ಮ ರಾಜ್ಯವೇ ನಿಮ್ಮ ರಾಜ್ಯವೆಂದೆನುತಲಿ
ಮನ್ನಿಸಿದರು ಮಾತಾಪಿತರ

ಶ್ರೀಮಾಯಾ ಜಯಾ ಕೃತಿ ಶಾಂತಿ ಮಾಲಕ್ಷುಮಿ
ಆ ಮಹ ಅತಿಪುಣ್ಯಶಾಲಿ
ಕೋಮಲೆ ತನ್ನ ಕೊಂಡಾಡುವೊ ಜನರನು
ನೇಮದಿ ನಿಂತು ಕಾಯುವಳು

ಭಕ್ತಿಯಿಂದಲಿ ಮಾಡೆ ಮುಕ್ತರಾಗುವರು
ಧರ್ಮಾರ್ಥ ಕಾಮ್ಯವು ಫಲಿಸುವುದು
ಮುತ್ತೈದೆತನ ಧನಧಾನ್ಯ ಸಂತಾನ
ಸಮಸ್ತ ಕಾರ್ಯವೂ ಸಿದ್ಧಿ ಉಂಟು

ಕಂತುಪಿತನ ರಾಣಿಯ ಕಥೆಯನು ಪೇಳಲು
ಸಂಪತ್ತು ಶನಿವಾರದಲ್ಲಿ
ದಂಪತಿಗಳ ಸುಖದಿಂದಿಟ್ಟು ಅವರನು
ಅಭ್ಯಂತರವಿಲ್ಲದೆ ಸಲಹುವಳು

ಅಚ್ಯುತನರಸಿ ಅನುಗ್ರಹ ಪಡೆಯಲು
ಇಚ್ಛೆ ಸಂಪೂರ್ಣವಾಗುವುದು
ಸಚ್ಚಿದಾನಂದ ಭೀಮೇಶಕೃಷ್ಣನು ನೋಡಿ
ಮೆಚ್ಚಿ ಸೂರಿ ಆಡುವ ದಯವ

Comments

Popular posts from this blog

Kaksha Taratamya