DHANVANTARI SULADI

 ಧನ್ವಂತರೀ ಸ್ತೋತ್ರ ಸುಳಾದಿ

ಧ್ರುವತಾಳ:

ಆಯು ವೃದ್ಧಿಯಾಗೋದು ಶ್ರೇಯಸ್ಸು ಬರುವುದು | ಕಾಯಾ ನಿರ್ಮಲಿನಾ ಕಾರಣವಾಹುದೋ | ಮಾಯಾ ಹಿಂದಾಗುವುದು ನಾನಾರೋಗದ ಬೀಜ | ಬೇಯಿಸಿ ಕಳೆವುದು ವೇಗದಿಂದ | ನಾಯಿಮೊದಲಾದ ಕುತ್ಸಿತದೇಹನಿ ಕಾಯವ ತೆತ್ತು ದುಷ್ಕರ್ಮದಿಂದ | ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ | ಹೇಯ ಸಾಗರದೊಳು ಬಿದ್ದು ಬಳಲೀ | ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ | ಬಾಯಿಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ ರಾಯಾ ರಾಜೌಷಧಿ ನಿಯಾಮಕಕರ್ತ | ಶ್ರೀಯರಸನೆಂದು ತುತಿಸಲಾಗಿ ತಾಯಿ ಒದಗಿಬಂದು ಬಾಲನ್ನ ಸಾಕಿದಂತೆ | ನೋಯಗೊಡದೆ ನಮ್ಮನ್ನು ಪಾಪಿಪಾ ಧೇಯಾ ದೇವಾದಿಗಳಿಗೆ ಧರ್ಮಜ್ಞ ಗುಣಸಾಂದ್ರ | ಶ್ರೇಯಸ್ಸು ಕೊಡುವನು ಭಜಕರಿಗೆ ಮಾಯಾಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸ | ನ್ಯಾಯವಂತನಾಗಿ ಚೇಷ್ಟೆ ಮಾಳ್ಪಾ ವಾಯುವಂದಿತ ನಿತ್ಯ ವಿಜಯ ವಿಠ್ಠಲ ರೇಯಾ ಪ್ರಿಯನು ಕಾಣೊ ನಮಗೆ ಅನಾದಿರೋಗ ಕಳೆವಾ ||೧|| 

ಮಟ್ಟತಾಳ: 

ಧನ್ವಂತ್ರಿ ಶ್ರೀ ಧನ್ವಂತ್ರಿ ಎಂದು ಸನ್ನುತಿಸಿ ಸತತ ಭಿನ್ನ |  ಜ್ಞಾನದಿಂದ ನಿನ್ನವ ನಿನ್ನವನೊ ಘನ್ನತಿಯಲಿ ನೆನೆದ | ಮನ್ನುಜ ಭುವನದೊಳು ಧನ್ಯನು ಧನ್ಯನೆನ್ನಿ | ಚನ್ನ ಮೂರುತಿ ಸುಪ್ರಸನ್ನ ವಿಜಯ ವಿಠ್ಠಲ ನ್ನ ಸತ್ಯವೆಂದು ಬಣ್ಣಿಸು ಬಹುವಿಧದಿ ||೨|| 

ತ್ರಿವಿಡಿತಾಳ: 

ಶಶಿಕುಲೋದ್ಭವ ಧೀರ್ಘತಮನಂದನ ದೇವಾ |  ಶಶಿವರ್ಣ ಪ್ರಕಾಶ ಪ್ರಭುವೆ ವಿಭುವೆ ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ |  ಬಿಸಜಲೋಚನ ಅಶ್ವಿನೇಯ ವಂದ್ಯಾ | ಶಶಿಗರ್ಭ ಭೂರುಹ ಲತೆಪೊದೆತಾಪ ಓಡಿಸುವೌಷಧಿ ಶ್ರೀ ತುಲಸಿ ಜನಕ | ಅಸುರ ನಿರ್ಜರತತಿ ನೆರೆದು ಗಿರಿಯತಂದು ಮಿಸುಕದಲೆ ಮಹೋದಧಿ ಮರ್ದಿಸಲಾಗಿ |  ನಸುನಗುತ ಪುಟ್ಟಿದೆ ಪೀಯೂಷ ಘಟಧರಿಸಿ ಅಸಮ ದೈವನೆ ನಿನ್ನ ಮಹಿಮೆಗೆ ನಮೋ | ಬಿಸಿಜ ಸಂಭವ ರುದ್ರ ಮೊದಲಾದ ದೇವತಾ ಋಷಿನಿಕರ ನಿನ್ನ ಕೊಂಡಾಡುವರೊ ದಶದಿಶದೊಳು ಮೆರೆವ ವಿಜಯ ವಿಠ್ಠಲ ವಿಶ್ವ ಅಸು ಇಂದ್ರಿಯಂಗಳ ರೋಗ ನಿವಾರಣ ||೩|| 

ಅಟ್ಟತಾಳ: 

ಶರಣು ಶರಣು ಧನ್ವಂತರಿ ತಮೋಗುಣ ನಾಶ | ಶರಣು ಆರ್ತಜನ ಪರಿಪಾಲಕ ದೇವ | ತರುವೆ ಭವತಾಪ ತರುಣ ದಿತಿಸುತ | ಹರಣಮೋಹಕ ಲೀಲಾ ಪರಮ ಪೂರ್ಣ ಬ್ರಹ್ಮ ಬ್ರಹ್ಮ ಉದ್ಧಾರಕ |  ಉರು ಪರಾಕ್ರಮ ಉರಗಶಾಯಿ ವರಕಿರೀಟ ಮಹಾಮಣಿ ಕುಂಡಲ ಕರ್ಣ | ಮಿರುಗುವ ಹಸ್ತಕಂಕಣ ಹಾರಪದಕ ತಾಂಬರ ಕಾಂಚೀಪೀತಾಂಬರ ಚರಣ ಭೂಷಾ ಸಿರಿವತ್ಸಲಾಂಛನ ವಿಜಯ ವಿಠ್ಠಲ ರೇಯಾ ತರುಣಗಾತುರ ಜ್ಞಾನಮುದ್ರಾಂಕಿತ ಹಸ್ತಾ ||೪|| 

ಆದಿತಾಳ: 

ಏಳುವಾಗಲಿ ಮತ್ತೆ ತಿರುಗಿ ತಿರುಗುತಲಿ ಬೀಳುವಾಗಲಿ ನಿಂತು ಕುಳ್ಳಿರುವಾಗಲಿ | ಹೇಳುವಾಗಲಿ ಮಾತು ಕೇಳುವಾಗಲಿ ಕರೆದು ಪೇಳುವಾಗಲಿ ಪೋಗಿ ಸತ್ಕರ್ಮಮಾಡುವಾಗ |  ಬಾಳುವಾಗಲಿ ಭೋಜನ ನಾನಾ ಷಡ್ರಸ ಸಂ | ಮ್ಮೇಳವಾಗಲಿ ಮೇಲು ಪುತ್ರಾದಿ ಒಡನೊಡನೆ ಖೇಳವಾಗಿ ಮನುಜ ಮರ್ಯಾದೆ ನಿನ್ನಯ | ನಾಲಿಗೆ ಕೊನೆಯಲ್ಲಿ ಧನ್ವಂತರಿ ಎಂದು ಒಮ್ಮೆ ಕಾಲಅಕಾಲದಲ್ಲಿ ಸ್ಮರಿಸಿದರೆ ಅವಗೆ | ವ್ಯಾಳೆ ವ್ಯಾಳೆಗೆ ಬಾಹ ಭವಬೀಜ ಪರಿಹಾರ ನೀಲಮೇಘಶ್ಯಾಮ ವಿಜಯ ವಿಠ್ಠಲ ರೇಯಾ ವಾಲಗ ಕೊಡುವನು ಮುಕ್ತರಸಂಗದಲಿ ||೫|| 

ಜತೆ: 

ಧಂ ಧನ್ವಂತರಿ ಎಂದು ಪ್ರಣವ ಪೂರ್ವಕದಿಂದ | 
ವಂದಿಸಿ ನೆನೆಯಲು ವಿಜಯ ವಿಠ್ಠಲ ಒಲಿವಾ ||


Comments

Popular posts from this blog

Kaksha Taratamya