DHREYOLAGE NAMMA GURURAGHAVENDRA RINNU


ಶ್ರೀ ಗೋಪಾಲದಾಸರು ರಚಿಸಿದ

 ಶ್ರೀ *ಗುರುರಾಘವೇಂದ್ರರ ಮಹಾತ್ಮ್ಯ ಸ್ತೋತ್ರ ಸುಳಾದಿ 

ಧರೆಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು |
ಇರುತಿಪ್ಪ ವಿವರ ಅರಿದಷ್ಟು ವರಣಿಸುವೆ |
ಸ್ಥಿರವಾಗಿ ಮಂತ್ರಾಲಯ ಪುರ ತುಂಗಾತೀರದಿ |
ಹರಿಭಕ್ತ ಪ್ರಹ್ಲಾದ ವರಯಾಗ ಮಾಡಿ ಇಲ್ಲಿ |
ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯ ಮಾಡಿ |
ಪರಿಶುದ್ಧನಾದನೆಂದು ಅರಿತು ಈ ಸ್ಥಳದಲ್ಲಿ |
ಗುರುರಾಘವೇಂದ್ರರಾಯ ಶರೀರ ಪೋಗಾಡಿಸಿಲ್ಲಿ |
ಪರಲೋಕ ಸಾಧನ ಪರಿಪೂರ್ತಿ ಮಾಡಿಕೊಂಡು |
ಸಿರಿಕೃಷ್ಣನ್ನ ಚರಣಕ್ಕೆರಗಿ ಸಂತೋಷದಲ್ಲಿ |
ಧರಿಯ ಮ್ಯಾಲಿದ್ದ ಜನರ ಪೊರಿಯಬೇಕೆಂದೆನುತ |
ಹರಿ ನೋಡಿದನು ಇವರ ಪರಮ ದಯಾಳು ತಾನವನ್ನು ತಾನು |
ಗುರುವಂತರ್ಯಾಮಿಯಾಗಿ ವರವಾನೀಯಲಿ ಜಗಕೆ |
ನರಹರಿ ತಾನೆ ನಿಂದು ನಿತ್ಯ ಪೂಜೆಯಗೊಂಡು |
ಸಿರಿವುಳ್ಳ ಕೀರುತಿಯ ಸುರರಪಾಲಕ ಚಕ್ರಧರ ನಾರಾಯಣ ತಾನೆ |
ವರ ಸನ್ನಿಧಾನನಾಗಿ |-ವರಿಗೆ ಫಲ ತಂದೀವ ಇಹಪರದಲ್ಲಿನ್ನು |
ಕರುಣಾಕರ ರಂಗ ಗೋಪಾಲವಿಠ್ಠಲ ತನ್ನ |
ಶರಣರ ಪೊರೆವ ಚರಿಯಾ ಪರಿಪರಿ ಉಂಟೋ ||1||

ಮಟ್ಟತಾಳ

ನರಹರಿ ಕೃಷ್ಣರಾಮ ಸಿರಿ ವೇದವ್ಯಾಸ |
ಎರಡೆರಡು ನಾಲ್ಕು ಹರಿಯ ಮೂರುತಿಗಳು |
ಪರಿವಾರ ಸಹವಾಗಿ ಸಿರಿ ಸಹಿತದಿ ನಿಂದು |
ಸುರಗುರುವರ್ಯರು ಮಧ್ವಾಚಾರ್ಯರೇ ಮೊದಲಾಗಿ |
ತರುವಾಯದಲಿನ್ನು ತರತಮ್ಯನುಸಾರ |
ಪರಿಪರಿ ಯತಿಗಳು ಇರುತಿಪ್ಪರು ಇಲ್ಲಿ |
ಹರುಷದಿಂದಲಿ ವೇದಗರೆದು ಶಾಸ್ತ್ರಗಳನ್ನು |
ಪರಿಪರಿ ಪುರಾಣಭಾರತಗಾನದಲ್ಲಿ |
ಸರಿಸರಿ ಬಂದಂತೆ ಸರಿಗಮವೆನುತಲಿ |
ಭರದಿಂದಲಿ ಕುಣಿದು ಭಕುತಿಯಿಂದಲಿ ಇನ್ನು |
ಹರಿಯ ಪೂಜಿಸುತ್ತ ಹಗಲಿರುಳು ಬಿಡದೆ |
ಪರತತ್ವದ ವಿವರ ಪರಿಪರಿ ಪೇಳುವರು |
ಗರುಡವಾಹನರಂಗ ಗೋಪಾಲವಿಠ್ಠಲ |
ಶರಣರ ಪಾಲಿಸುತ ಇರುತಿಪ್ಪನು ಇಲ್ಲಿ ||2||

ತ್ರಿವಿಡಿತಾಳ

ನರಹರಿರೂಪನಾಗಿ ವಾಸವಾಗಿ ಇಲ್ಲಿ
ದುರಿತ ದುಷ್ಕ್ರತ ಬ್ರಹ್ಮೇತಿಗಳೋಡಿಸುವ |
ಸಿರಿ ರಾಮನಾಗಿಲ್ಲಿ ಪರಿ ಪರಿ  ದೇಶಾಂತರ
ಅನ್ನ ಕಳಕೊಂಡು ನರರಿಲ್ಲಿ ಬಂದರೆ
ಸ್ಥಿರಪಟ್ಟ ಕಟ್ಟುವ ಸಿರಿ ಕೃಷ್ಣನಾಗಿಲ್ಲಿ |
ಪರಿಪರಿಯಲಿ ಬಂದ ಪರಮಾತುರರಿಗೆ |
ವರವೀವ ಪುತ್ರೋತ್ಸವ ಮುಂಜಿ ಮದುವೆಯ
ಹರಕಿಗಳಕೈಕೊಂಡು ಹರುಷ ಬಡಿಸುವವರ |
ಸಿರಿ ವೇದವ್ಯಾಸನಿಲ್ಲಿ ಭರದಿಂದಲಿ ಬಂದ
ದುರುವಾದಿಗಳನೆಲ್ಲ ಭರದಿಂದಲೋಡಿಸಿ |
ಮುರಿದು ಅವರ ಶಾಸ್ತ್ರ ಹರಿಸರ್ವೋತ್ತಮನೆಂದು
ಇರುವನಿಲ್ಲಿ ತೋರಿ ಶರಣಜನಕ ಇನ್ನು |
ವರ ಜ್ಞಾನ ಸುಧಿಯನು ಕರೆದು ಕೊಡುತಲಿಪ್ಪ |
ಸಿರಿವಂದಿತಪಾದ ಗೋಪಾಲವಿಠ್ಠಲ
ಪರಿಪರಿಯಲಿ ಇಲ್ಲಿ ವಾಲಗ ಕೈಕೊಂಬ ||3||

ಅಟ್ಟತಾಳ

ರಾಘವೇಂದ್ರನೆಂಬ ರೂಪ ತಾನೆ ಆಗಿ |
ರಾಘವೇಂದ್ರನೆಂಬ ನಾಮ ಇಡಿಸಿಕೊಂಡು |
ರಾಘವೇಂದ್ರರಿನ್ನು ಮಾಡಿದಂಥ ಪುಣ್ಯ |
ಭೋಗವರಿತು ತನ್ನ ಭಾಗವತರ ಕೀರ್ತಿ |
ಸಾಗಿಸಿ ಸಲಹಲಿ ತ್ರಿಜಗದೊಳಗಿನ್ನು |
ಮೇಘ ಸುರಿದಂಥಮೋಘ ಕೀರುತಿಯನ್ನು |
ರಾಘವ ಇವರಿಗೆ ರಾಜ್ಯದಿ ತಂದೀವ |
ರಾಘವೇಂದ್ರ ಮೂರ್ತಿ ಗೋಪಾಲವಿಠ್ಠಲ |
ಭಾಗವತರಲ್ಲಿ ಬಹುಪೂಜೆಯನು ಗೊಂಬ ||4||

ಆದಿತಾಳ

ದಿನದಿನಕಿಲ್ಲಿ ನೂತನ ಪೂಜೆಗಳಾಗ್ವವು |
ದಿನದಿನಕಿಲ್ಲಿ ನೂತನ ವಾರ್ತೆಗಳಾಗ್ವವು |
ದಿನದಿನಕಿಲ್ಲಿ ನೂತನೋತ್ಸವಗಳಾಗುವವು|
ಜನರ ಸಂದಣಿ ಪ್ರತಿದಿನ ವಿಪ್ರಭೋಜನ |ಸಪ್ತಶತ ವರುಷ
ಜನನಾಥ ತಾನಿಲ್ಲಿ ಅನುವಾಗಿ |
ತಾನಿಂದು ಘನಮಹಿಮೆಯಿಂದಲಿ |
ಜನರಪಾಲಿಸುವುದಕ್ಕನುಮಾನ ಸಲ್ಲದೋ |
ಗುಣಗಣ ಪರಿಪೂರ್ಣ ಗೋಪಾಲವಿಠ್ಠಲ |
ಅಣೋರಣಿ ಎಂಬುವಗೆ ಎಣೆಯಾರೋ ಜಗದೊಳಗೆ ||5||

ಜತೆ
ಮಂತ್ರಸಿದ್ಧಿಯಕ್ಷೇತ್ರ ಇದು ನೋಡಿ ಕೋವಿದರು|
ಮಂತ್ರಪ್ರತಿಪಾದ್ಯ ಗೋಪಾಲವಿಠ್ಠಲನಿಂದ ||6||

Comments

Popular posts from this blog

Kaksha Taratamya