HELEVANA KATTE GIRIYAMMA CHARITRE

ಶ್ರೇಷ್ಟ ಹರಿದಾಸಿ ಹೆಳವನಕಟ್ಟೆ ಗಿರಿಯಮ್ಮ ಚರಿತ್ರೆ:- 

🌸🌸🌸🌸🌸🌸🌸🌸🌸

 ಹರಿದಾಸ ಸಾಹಿತ್ಯದಲ್ಲಿ ಹರಿದಾಸರ ಜೊತೆ ಹರಿದಾಸಿಯರ ಕೊಡುಗೆಯು ಬಹಳ ಅಪಾರವಿದೆ. ಮೊದಲಿಗೆ ಎಲ್ಲರ ಮನದಲ್ಲಿ ನೆನಪಾಗುವುದೇ "ಹೆಳವನಕಟ್ಟೆ ಗಿರಿಯಮ್ಮ".

ಕರ್ನಾಟಕದ "ಮೀರಾ" ಎಂದೇ ಪ್ರಖ್ಯಾತವಿದೆ. ಹರಿಭಕ್ತಿಯ ಸ್ವರೂಪವಾಗಿದ್ದಾಳೆ; ಎಂದು ವಿದ್ವಾಂಸರು ಹೇಳುತ್ತಾರೆಹೆಣ್ಣು ಕುಲದ ಅಭಿಮಾನ ಹೆಮ್ಮೆಯವರಾಗಿದ್ದಾರೆ.

ಉತ್ತರ ಕರ್ನಾಟಕದ ಪ್ರತಿ ಮನೆಯಲ್ಲೂ ಇವಳ ಸಾಹಿತ್ಯ ಮನೆಮಾತಾಗಿದೆ.  ಗಿರಿಯಮ್ಮನ ಜನನ ಕ್ರಿ.ಶ.೧೭೫೦ ಸುಮಾರಿಗೆ ಜೀವಿಸಿದ್ದರು ಅಥವಾ ೧೮ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದರು;ಎಂಬ ಊಹೆ ಇದೆ.ಇವಳ ಜನನದ ಮಾಹಿತಿ ನಿಖರವಾಗಿ ಸಿಕ್ಕಿಲ್ಲ.

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ತಂದೆ ಭೀಷ್ಟಪ್ಪ , ತಾಯಿ ತುಂಗವ್ವರಿಗೆ ಬಹಳ ವರುಷಗಳಿಂದ ಮಕ್ಕಳಾಗದ ಕಾರಣ ; ತಿರುಪತಿ ತಿಮ್ಮಪ್ಪನ ಸೇವೆ ಮತ್ತು ಹರಿಕೆಯ ಫಲವಾಗಿ ಪುತ್ರಿರತ್ನ ಜನನವಾಯಿತು. ಸೇವೆ ಫಲದಿಂದ ಹುಟ್ಟಿದ್ದಕ್ಕೆ , ಈ ಮಗುವಿಗೆ "ಗಿರಿಯಮ್ಮ" ನಾಮಕರಣ ಮಾಡಿದರು. 

ಗಿರಿಯಮ್ಮ ನಾಲ್ಕು ವರುಷ ಇರುವಾಗಲೇ ತಾಯಿ ತೀರಿಹೋದರು. ಸ್ವಲ್ಪ ದಿನಗಳಲ್ಲಿ ತಂದೆಯು ತೀರಿಹೋದರು.ಇವಳು ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದಳು. ಬಾಲ್ಯದಿಂದಲೇ ದೈವಭಕ್ತೆ, ಪರೋಪಕಾರ ಗುಣ,ವೃದ್ಧರ ಸೇವೆಯ ಗುಣ ಎಲ್ಲವೂ ಅಭಿವೃದ್ಧಯಾಗಿ ಸುಗುಣಗಳ ಗಣಿಯಾಗಿದ್ದಳು.

ಮಲೆಬೆನ್ನೂರಿನ ತಿಪ್ಪರಸನೊಂದಿಗೆ ವಿವಾಹವಾಯಿತು. ವಿವಾಹವಾದರೂ ಸಂಸಾರ ವ್ಯಾಮೋಹಕ್ಕೆ ಎಂದು ಒಳಗಾಗಲಿಲ್ಲ. ಹೆಳವನಕಟ್ಟೆ ರಂನಾಥನನ್ನು ಬಹಳ ಅನನ್ಯ ಭಕ್ತಿಯಿಂದ  ಸೇವೆ ಮಾಡುತ್ತಿದ್ದಳು.

ಹೇಳವನ ಕಟ್ಟೆ ರಂಗನಾಥ ಹೆಸರು ಬರಲುಕಾರಣವೆನೆಂದರೆ ಕಮಾರನ ಹಳ್ಳಿ ಗ್ರಾಮದಲ್ಲಿ ಭಿಕ್ಷೆಕ್ಕಾಗಿ ಒಬ್ಬ "ಹೆಳವ" ಕುಡುತ್ತಿದ್ದನು.ಅಲ್ಲಿನ ಜನರು ತಮ್ಮ ದನಗಳನ್ನು ಹೆಳವ ಕುಡುವ ಸ್ಥಳದಲ್ಲಿ ನೋಡಿಕೊಳ್ಳಲು  ಬಿಟ್ಟು ತಮ್ಮತಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಇವನ ನಿಷ್ಟೆಯಿಂದ ಕಾಲಕ್ರಮೇಣ ಜನರು ಇವನಿಗೆ ಒಂದು ಗುಡಿಸಲು, ದನಗಳ ಹಾಲು ಕೊಡುತ್ತಿದ್ದರು. ಗುಡಿಸಲ ಪಕ್ಕದಲ್ಲಿಯೇ ಗೋಕಟ್ಟೆ ಕಟ್ಟಲು ಗೋಲ್ಲರಲ್ಲಿ ವಿನಂತಿಸಿದಾಗ , ಗೋಕಟ್ಟೆ ನಿರ್ಮಾಣ ವಾಯಿತು. ಕ್ರಮೇಣ ಜನವಸತಿ ಬೆಳಯಿತು. ಹೆಳವ ಕಟ್ಟಿಸಿದ ಈ ಕಟ್ಟೆಗೆ "ಹೆಳವನ ಕಟ್ಟೆ" ಎಂದು ಹೆಸರಾಯಿತು. ಇಲ್ಲಿ ಪಕ್ಕದಲ್ಲಿ ಒಂದು ಹುತ್ತವಿತ್ತು.ಹಸುಗಳು ಕೆಚ್ಚಲು ಭಾರವದಾಗ , ಆ ಹುತ್ತದ ಮೇಲೆ ಹಾಲು ಕರೆಯುತ್ತದ್ದವು. ಒಂದು ದಿನ ಹೆಳವನಿಗೆ ಸ್ವಪ್ನಾದೇಶವಾಯಿತು.ಈ ಹುತ್ತದಲ್ಲಿ ಮೂರ್ತಿಗಳಿರುದಾಗಿ , ಅದರಂತೆ ಬಗೆದು ನೋಡಿದಾಗ ಅಲ್ಲಿ ಹರಿಹರ ಬ್ರಹ್ಮ ರ ಮೂರ್ತಿಗಳು ದೊರೆತವು. ಕಾಲಾಂತರದಲ್ಲಿ ದೇವಸ್ತಾನ ನಿರ್ಮಾಣವಾಯಿತು. ಮುಂದೇ ಪುಂಗನೂರಿನ ಅಸರಿಂದ ನಿರ್ಮಾಣವಾಗಿರಬೆಕೆಂಬುದು ವಿದ್ವಾಂಸರ ಅನಿಸಿಕೆ.

ಗಿರಿಯಮ್ಮಾ, ಇದೇ ಹೆಳವನಕಟ್ಟೆ ರಂಗನಾಥನನ್ನು ನೇಮ ನಿಷ್ಟೆಯಿಂದ ಭಕ್ತಿ ಗೈಯುತ್ತಿದ್ದಳು.ಮುಂದೆ ಇವಳಿಗೆ ದೈವಿ ಬಲದಿಂದ  ವಾಕ್ ಸಿದ್ಧಿಯಾಯಿತು.ನುಡಿಯುವ ಒಂದೊಂದು‌ ಮಾತು ಸತ್ಯವಾಗ ತೊಡಗಿದವು. ಇವರಲ್ಲಿ ಪರಿಹಾರ ಕೇಳಲು ಬರುತ್ತಿದ್ದರು. ಇವರ ಮೃದು‌ ಮಾತು, ಮಮತೆಯ ಸ್ವರ ನೊಂದ ಜೀವಕ್ಕೆ ಅಮೃತ ಸಿಂಚನದಂತಾ ಗುತ್ತಿತ್ತು. ಮನಸ್ಸಿಗೆ ಮುದ ನೀಡಿ ,ಮೊಗದಲ್ಲಿ ಉಲ್ಲಾಸ ಸಂತೋಷ ಮೂಡುತ್ತಿತ್ತು. 

ನೊಂದ ಜನರು, ತಾಯಿಯಲ್ಲಿ ಮಗು ಓಡಿ ಬರುವಂತೆ, ಇವರಲ್ಲಿ ಓಡಿ ಬರುತ್ತಿದ್ದರು. ಅಷ್ಟು ! ಇವರ ಮೇಲೆ ನಂಬಿಕೆ ಮತ್ತು ಭಕ್ತಿ.

ಹೀಗೆ ರಂಗನಾಥನ ಸೇವೆಯಲ್ಲಿ ತೊಡಗಿ , ಸನ್ಯಾಸಿನಿಯಂತೆ ಇದ್ದಳು.ಇವಳ ಪತಿ ಇವಳ ಮನ ಇಂಗಿತ ಅರಿತು ಯಾವ್! ಕಾರ್ಯ ಸಾಧನೆಗೆ ಅಡ್ಡಿ ಬರಲಿಲ್ಲ .ಮುಂದೆ ಗಿರಿಯಮ್ಮ ಮನೆಯ ಹಿರಿಯರನ್ನು ಮತ್ತು ಪತಿಯನ್ನು ಎರಡನೇ ಮದುವೆಗೆ ಒಪ್ಪಿಸಿ , ಸ್ವತಃ ತಾನೇ ಮುಂದು ನಿಂತು ಎರಡನೇ ಮದುವೆ ಮಾಡಿಸಿದಳು. ತನ್ನ ಬಳಿ ಇದ್ದ ಎಲ್ಲ ಒಡವೆ ವಸ್ತುಗಳನ್ನು ಅವಳಿಗೆ ಉಡುಗೊರೆಯಾಗಿ ಕೊಟ್ಟು ಆಶಿರ್ವದಿಸಿ , ಭಗವಂತ ಕಾರ್ಯ ಸೇವೆಗಾಗಿ ತನ್ನ ಜೀವ ಮುಡುಪಾಗಿ ಇಟ್ಟಳು.

ಒಮ್ಮೆ ಮಲೇಬೆನ್ನೂರಿಗೆ ಗೋಪಾಲ ದಾಸರ ಆಗಮನವಾಯಿತು. ಭಕ್ತರು ಸೇರಿದರು. ಕೀರ್ತನೆಗಳು , ಪೂಜೆ ನಡಯಿತು. ಎಲ್ಲರಂತೆ ಗಿರಿಯಮ್ಮನು ಪೂಜೆ, ಕೀರ್ತನೆಯಲ್ಲಿ ಪಾಲ್ಗೊಂಡಿದ್ದಳು. ಗಿರಿಯಮ್ಮ ರಂಗವಲ್ಲಿಯಲ್ಲಿ ರಂಗನಾಥನ ಚಿತ್ರ ಬಿಡಿಸಿದ್ದಳು. ಅದರಲ್ಲಿ ರಂಗನಾಥನ ಮಂಗಳಮೂರ್ತಿ ದರ್ಶನವಾಗಿ ಆಶ್ಚರ್ಯದಿಂದ ಆನಂದಭಾಷ್ಪ ಬಂದವು.ಗಿರಿಯಮ್ಮಳ ಭಕ್ತಿಗೆ ಮೆಚ್ಚಿಅವಳಿಗೆ ಉಪದೇಶ ನೀಡಿ ಶ್ರೀ ಗೋಪಾಲ ಮೂರ್ತಿಯನ್ನು ನೀಡಿ ಅನುಗ್ರಹಿಸಿದರು. ಮುಂದೆ ಇವಳ ಸಿದ್ದಿಯ ಫಲವಾಗಿ ರಂಗನಾಥ ಸ್ವಾಮಿಯು ತನ್ನ ಎಲ್ಲ ರೂಪಗಳ ಆಟವನ್ನು ಪ್ರಕಟ ಮಾಡ ತೊಡಗಿದನು. ಹೀಗೆ ಇವಳ ಭಕ್ತಿ ಮತ್ತು ಪವಾಡಗಳು ಹಬ್ಬಿದವು.

ಮಲೇಬೆನ್ನೂರಿಗೆ ಶ್ರೀ ರಾಘವೇಂದ್ರ ಮಠದ ಶ್ರೀ ಸುಮತೀಂದ್ರ ತೀರ್ಥರು ಬಂದಾಗ, ಇವಳ ಹರಿಭಕ್ತಿ ತಪಃ ಪ್ರಭಾವಕ್ಕೆ  ಮೆಚ್ಚಿ ಆಶಿರ್ವದಿಸಿದರು. 

ಗಿರಿಯಮ್ಮ ತನಗೆ ತಪ್ತ ಮುದ್ರಾಧಾರಣ ಮಾಡಿಸಬೇಕೆಂದು ಸ್ವಾಮಿಗಳಲ್ಲಿ ಭಿನ್ನವಿಸಿಕೊಂಡಾಗ, "ಶ್ರೀ ಹರಿಯೇ ಚಂಕ್ರಾಂಕನ ಮಾಡಿರುವಾಗ , ನನ್ನದೇನೂ ಅಧಿಕಾರ ಇಲ್ಲಮ್ಮ" ಎಂದು ಸುಮತೀಂದ್ರ ಸ್ವಾಮಿಗಳು ಹೇಳಿದರಂತೆ. 

ಕಸ್ತೂರಿಯ ಗಂಧ ಮುಚ್ಚಿಡಲು ಹೇಗೆ ಸಾಧ್ಯವಿಲ್ಲವೂ! ಹಾಗೇ ಇವಳ ಪವಾಡ ಮತ್ತು ಸೇವೆ ಹಬ್ಬಿತು. ಕೃಷ್ಣನನ್ನು‌ ತನ್ನ ಮಗ ಎಂದು ತಿಳಿದು ಸದಾ ಅವನ ಜೊತೆ ಭಕ್ತಿರಸದಿಂದ ಆಟವಾಡುತಿದ್ದಳು. ಹೀಗಾಗಿ ಶ್ರೀ ಸುಮತೀಂದ್ರ ತೀರ್ಥರೆ ಇವಳನ್ನು"ಯಶೋದೆಯಮ್ಮಾ" ಎಂದು ಕರೆದಿದ್ದಾರೆ.

🌺 ಪವಾಡಗಳು 🌺

೧) ಒಮ್ಮೆ ರಂಗನಾಥ ದೇವರ ಕೈಯಲ್ಲಿ ಉಂಗರ ಕಳುವಾದಾಗ;;

ಅದು ಪೂಜಾರಿಯ ಮೇಲೆ ಅಪರಾಧ ಬಂತು. ಗಿರಿಯಮ್ಮ ನಲ್ಲಿ , ಪೂಜಾರಿ ತಾನು ನಿರಪರಾಧಿ; ತನ್ನನ್ನು ಪಾರು ಮಾಡಲು ಎಂದು ಕೇಳಿಕೊಂಡನು. ಇವನು ನಿಷ್ಕಳಂಕ ನಿರುವನೆಂದು ದಿವ್ಯ ದೃಷ್ಟಿಯಿಂದ ಅರಿತಳು. ಆಗ ರಂಗನಾಥನಲ್ಲಿ ಭಕ್ತಿಯಿಂದ ಸ್ತುತುಸಿದಳು.

"ಹೊನ್ನು ತಾ ಗುಬ್ಬಿ ಹೊನ್ನು ತಾ/ ನಮ್ಮ ಚಿನುಮಯಮೂರುತಿ ಚೆಲುವ ರಂಗನ ಕೈಗೆ......"ಎಂಬ ಹಾಡು ಮುಗಿಯುವದರಲ್ಲಿಯೆ ಎಲ್ಲಿಂದಲೋ ಬಂದ ಗುಬ್ಬಿ ತನ್ನ ಬಾಯಿಂದ ಕಚ್ಚಿ ಹಿಡಿದ ಉಂಗುರವನ್ನು ಚೆಲ್ಲಿ ಹೋಯಿತು. ಇದನ್ನು ನೋಡಿದ ಎಲ್ಲರಿಗೂ ತಮ್ಮ ತಪ್ಪಿನ ಅರಿವಾಯಿತು.

೨) ಮಳೆ ಬಾರದೇ ನೀರಿನ ಅಹಕಾರ ಉಂಟಾದಾಗ " ಮಳೆಯ ದಯ ಮಾಡೋ ರಂಗ..." ಎಂಬ ಪದ್ಯ ಹಾಡಿದಾಗ ಇಳೆಗೆ ಮಳೆ ಬಂದು ಕೊಳೆ ಹೋಗಿ ಕಳೆ ತಂದಿತು.

೩) ಶಾನುಭೋಗ ಮಾಡುತ್ತಿದ್ದ ಮೈದುನ ವೆಂಕಟರಾಯನಿಗೆ ಕುತಂತ್ರಿಗಳ ತಂತ್ರದಿಂದ ಭಂಧನಕ್ಕೆ ಒಳಗಾದ; ಆಗ ಗಿರಿಯಮ್ಮ ಭಂಧನ ಮೋಚಕನಾದ ರಂಗನಾಥನನ್ನು ಪ್ರಾರ್ಥಸಿದಳು. ಮೇಲಾಧಿಕಾರಿಗೆ ಸ್ವಪ್ನಾದೇಶವಾಗಿ ಸತ್ಯ ಬಯಲಿಗೆಳಿದು ಮೈದನನು ನಿರಪರಾಧಿ ಎಂದು ಸಾಬೀತ ವಾಯಿತು.

೪)ಪುಂಗನೂರಿನ ರಾಜಕುಮಾರನಿಗೆ ಎಳೇ ವಯಸ್ಸಿನಲ್ಲಿ ಕಣ್ಣು ಹೋಗಿದ್ದವು. ಆಗ ಪರಮಾತ್ಮನನ್ನು ಅನನ್ಯ ಭಕ್ತಿಯಿಂದ ; "ತೋರಬಾರದೇ ನಿಮ್ಮ ಚರಿತೆಯ ನರರೊಳು ನಗೆಗೇಡು ಮಾಡದೇ// ಕಲ್ಲೊಳು ಕಾಂತೆಯ ಮಾಡಿದವ ನೆಂದಲ್ಲರು ಜಗದೊಳು ಪೇಳುವರು// ಎಂದು ಹಾಡುತ್ತಾ ದೇವರಿಗೆ ಹಚ್ಚುವದೀಪದ ಕಾಡಿಗೆಯನ್ನು ಲೇಪಿಸಿಕಣ್ಣು ತರಿಸಿದಳು. 

ಹೀಗೆ ನಿರಂತರ ನೊಂದ ಬಂದ ಭಕ್ತರಿಗೆ ಸ್ವಾಂತನದಿಂದ ಪರಿಹರಿಸುತ್ತಿದ್ದಳು.

ಗಿರಿಯಮ್ಮ ಸಾವಿರಾರು ಕೀರ್ತನೆಗಳನ್ನು ರಚಿಸಿದ್ದಾರೆ.ಹಾಗೇ ಕೆಲವು ಕಥೆಗಳನ್ನು ಸಾಂಗತ್ಯಛಂದಲ್ಲಿ ರಚಿಸಿದ್ದಾಳೆ." ಚಂದ್ರಹಾಸ ಚರಿತೆ", ಸೀತಾ ಕಲ್ಯಾಣ,ಇವೇ ಮೊದಲಾದ ಕಾವ್ಯಗಳು. ಬ್ರಹ್ಮ ಕೊರವಂಜಿ, ಲವಕುಶರ ಕಾಳಗ, ಉದ್ಧಾಲಕನ ಹಾಡು,ಶಂಕರ ಗಂಡನ ಕಥೆ,ಕೃಷ್ಣ-ಕೊರವಂಜಿ, ಗಜೇಂದ್ರ ಮೋಕ್ಷ, ಗಿಳಿ-ಪಾರಿಜಾತ, ಇವೇ ಮೊದಲಾದಅನೇಕ ಕಥನ ಕಾವ್ಯಗಳು. ಉದ್ಧಾಲಕನ ಹಾಡು ಇದರಲ್ಲಿ ಐದನೂರು ಪದ್ಯಗಳಿದ್ದು ಧೀರ್ಘ ಕಾವ್ಯವಾಗಿದೆ. ಹರಿಹರ ಭೇಧವೆಣಿಸದೇ ಅನೇಕ ಕೀರ್ತನೆಗಳನ್ನು  ಬರೆದು ಹಾಡಿದ್ದಾರೆ.

ಗಿರಿಯಮ್ಮ ತನ್ನ ಕೊನೆಯ ದಿನಗಳನ್ನು ಹೊನ್ನಾಳಿಯ ಸಮೀಪದ ಕಮ್ಮಾರ ಗಟ್ಟೆಯ ತುಂಗ ಭದ್ರ ತೀರದಲ್ಲಿ ಪ್ರಾಣ ದೇವರ ದೇವಸ್ಥಾನ ಸ್ಥಾಪಿಸಿದಳು. ಮುಂದೆ  ಶ್ರಾವಣ ಶುದ್ಧ ಪಂಚಮಿಯಂದು ತುಂಗೆಯಲ್ಲಿ ಭೌತಿಕ ದೇಹವನ್ನು  ತ್ಯಜಿಸಿ ಇಂದಿಗೂ ಜನ ಮಾನಸದಲ್ಲಿ ಅಚ್ಚಳಿಯದೇ ಇದ್ದಾರೆ.

 ಗಿರಿಯಮ್ಮ ಸ್ಥಾಪಿಸಿದ ಪ್ರಾಣ ದೇವರ ರಥೋತ್ಸವವಾಗುತ್ತದೆ. ಹಾಗೇ ಶ್ರೀ ರಂಗನಾಥದೇವಸ್ಥಾನದ ಆವರಣದಲ್ಲಿ ಭಕ್ತರು ಗಿರಿಯಮ್ಮಗೂ ಗುಡಿ ಕಟ್ಟಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ. ಒಟ್ಟಾರೆ ಗಿರಿಯಮ್ಮ ಸ್ತ್ರೀ ಕುಲಕ್ಕೆ ಕಳಶವಾಗಿದ್ದಾರೆ.  ದಾಸಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನದಿಂದ ಮನ್ನಣೆ ಪಡಿದಿದ್ದಾರೆ .

🖋 ಪ್ರಿಯಾ ಪ್ರಾಣೇಶ ಹರಿದಾಸ

Comments

Popular posts from this blog

Kaksha Taratamya